ಇಸ್ಲಾಮಾಬಾದ್: ಉಗ್ರ ಪೋಷಣೆಯ ಪಾಕಿಸ್ತಾನವೀಗ ಸಂಕಷ್ಟಕ್ಕೆ ಸಿಲುಕಿದೆ. ಅಸಮರ್ಥ ನಾಯಕತ್ವ, ಆರ್ಥಿಕ ಸುಧಾರಣೆ ಕ್ರಮಗಳ ಕೊರತೆಯಿಂದಾಗಿ ದಿವಾಳಿಯಾಗಿದೆ. ಹಾಗಾಗಿ, ಹಣಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಇಂತಹ ಪಾಕಿಸ್ತಾನಕ್ಕೆ ಈಗ ಅದೃಷ್ಟ ಖುಲಾಯಿಸಿದೆ. ಹೌದು, ಪಾಕಿಸ್ತಾನದಲ್ಲಿ ಸುಮಾರು 80 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ ಇರುವ ನಿಕ್ಷೇಪ (Pakistan Gold) ಪತ್ತೆಯಾಗಿದೆ.
ಹೌದು, ಪಂಜಾಬ್ ಪ್ರಾಂತ್ಯದ ಅಟೋಕ್ ಜಿಲ್ಲೆಯ ಸಿಂಧೂ ನದಿಯ ಬಳಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಪಾಕಿಸ್ತಾನ ಸರ್ಕಾರ ನಿಯೋಜನೆ ಮಾಡಿದ ತಜ್ಞರ ತಂಡವು ಸಿಂಧೂ ನದಿಯ ತಟದಲ್ಲಿ ಬೃಹತ್ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದೆ. ಸುಮಾರು 80 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ನಿಕ್ಷೇಪದಿಂದ ಉತ್ಖನನ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದಾಗಿ ಹಣಕಾಸು ದುಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ.
ಪಾಕಿಸ್ತಾನದ ನ್ಯಾಷನಲ್ ಎಂಜಿನಿಯರಿಂಗ್ ಸರ್ವಿಸ್ ಟೀಮ್ ತಜ್ಞರು ಪಂಜಾಬ್ ಪ್ರಾಂತ್ಯದಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದ್ದಾರೆ ಎಂದು ಪಾಕಿಸ್ತಾನದ ಡಾನ್ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ. “ಈಗ ಬೃಹತ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಶೀಘ್ರದಲ್ಲೇ ಉತ್ಖನನ ಮಾಡಲು ಬೃಹತ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತದೆ” ಎಂದು ಟೀಮ್ ಮುಖ್ಯಸ್ಥ ಜರ್ಘಾಮ್ ಇಶಾಕ್ ಖಾನ್ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನವು ಸಾಲದ ಸುಳಿಗೆ ಸಿಲುಕಿದ ಕಾರಣ ಚಿನ್ನದ ಮೀಸಲು ಪ್ರಮಾಣ ಭಾರಿ ಕುಸಿದಿದೆ. 2024ರ ಮಾಹಿತಿ ಪ್ರಕಾರ, ಪಾಕಿಸ್ತಾನದ ಚಿನ್ನದ ಮೀಸಲು ಮೊತ್ತವು ಸುಮಾರು 45 ಸಾವಿರ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಈಗ ಚಿನ್ನದ ಮೀಸಲಿಗಿಂತ ದುಪ್ಪಟ್ಟು ಮೊತ್ತದ ನಿಕ್ಷೇಪ ಪತ್ತೆಯಾಗಿರುವುದು ಪಾಕಿಸ್ತಾನ ಸರ್ಕಾರ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ತಿಳಿದುಬಂದಿದೆ.