ಅಂತು ಇಂತೂ ಪಾಕಿಸ್ತಾನ ತಂಡಕ್ಕೆ ಜಯ ಸಿಕ್ಕಂತಾಗಿದೆ. 152 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪಾಕ್ ಗೆಲುವಿನ ನಗೆ ಬೀರಿದೆ.
ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕ್ 1-1 ರಿಂದ ಸಮಬಲ ಮಾಡಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಗೆಲುವು ಸಾಧಿಸಿತ್ತು. ತಿರುಗೇಟು ನೀಡಿರುವ ಪಾಕಿಸ್ತಾನ ತಂಡ ಬರೋಬ್ಬರಿ 44 ತಿಂಗಳುಗಳ ನಂತರ ತನ್ನ ತವರು ನೆಲದಲ್ಲಿ ಗೆದ್ದು ಬೀಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 366 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 291 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್ನಲ್ಲಿ 75 ರನ್ ಗಳ ಮುನ್ನಡೆ ಗಳಿಸಿತ್ತು. ನಂತರ 221 ರನ್ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿತು. ಗೆಲುವಿಗಾಗಿ ಕಾದಾಟ ಆರಂಭಿಸಿದ ಇಂಗ್ಲೆಂಡ್ ಮಾತ್ರ ಕೇವಲ 144 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಾಕಿಸ್ತಾನ್ ಗೆದ್ದು ಬೀಗಿತು.
ಎರಡನೇ ಟೆಸ್ಟ್ ನಲ್ಲಿ 297 ರನ್ ಗಳ ಗುರಿ ಬೆನ್ನಟ್ಟಿ ಗೆದ್ದಿದ್ದ ಇಂಗ್ಲೆಂಡ್ ಆಟಗಾರರು ಎರಡನೇ ಪಂದ್ಯದಲ್ಲಿ ಸೋಲು ಕಾಣುವಂತಾಯಿತು. ಎರಡನೇ ಟೆಸ್ಟ್ನಲ್ಲಿ ಆಡುವ ಅವಕಾಶ ಪಡೆದಿದ್ದ ನೋಮನ್ ಅಲಿ 8 ವಿಕೆಟ್ ಪಡೆದರು. ಸಾಜಿದ್ 2 ವಿಕೆಟ್ ಪಡೆದರು. ಈ ಮೂಲಕ ಬರೋಬ್ಬರಿ ಗೆಲುವಿಗಾಗಿ 1348 ದಿನಗಳಿಂದ ಕಾಯುತ್ತಿದ್ದ ಪಾಕ್ ನ ಕನಸು ನನಸಾಯಿತು. ಕೆಲವು ಹಿರಿಯ ಆಟಗಾರರನ್ನು ಸೋಲಿನಿಂದಾಗಿ ತಂಡದಿಂದ ಹಿಂದೆ ಸರಿಸಲಾಗಿತ್ತು. ಆದರೆ, ಅವರ ಅನುಪಸ್ಥಿತಿಯಲ್ಲಿ ಗೆದ್ದಿದ್ದು, ಅವರಿಗೆ ನಿರಾಸೆ ತಂದಿದೆ.