ಇಸ್ಲಾಮಾಬಾದ್: ಧರ್ಮದ ಅಮಲು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಗೆ ಪ್ರಚೋದನೆ, ಧರ್ಮಾಂಧತೆಯ ಮದದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ, ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಪಾಕಿಸ್ತಾನದಲ್ಲೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಹೌದು, ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳು ಹಾಗೂ ಸಿಖ್ಖರ ಗುರುದ್ವಾರಗಳ ಪುನರುಜ್ಜೀವನಕ್ಕೆ ಪಾಕ್ ಸರ್ಕಾರವೇ ಯೋಜನೆ ರೂಪಿಸಿದೆ.
ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಮಂಡಳಿ ಅಧ್ಯಕ್ಷ ಸೈಯದ್ ಅತೌರ್ ರೆಹಮಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳು ಹಾಗೂ ಗುರುದ್ವಾರಗಳನ್ನು ಮರು ಅಭಿವೃದ್ಧಿಗೊಳಿಸಲಾಗುತ್ತದೆ. ಇದಕ್ಕೆ ಪಾಕಿಸ್ತಾನ ಸರ್ಕಾರದಿಂದ 100 ಕೋಟಿ ರೂ. ಖರ್ಚು ಮಾಡಲಾಗುತ್ತದೆ ಎಂದು ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಸೈಯದ್ ಅತೌರ್ ರೆಹಮಾನ್ ಮಾತನಾಡಿದರು. “ಪಾಕಿಸ್ತಾನದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಅಭಿವೃದ್ಧಿಗೆ ಹಣ ವ್ಯಯಿಸಲಾಗುತ್ತಿದೆ. ಈಗ ನೂರು ಕೋಟಿ ರೂ. ವೆಚ್ಚದಲ್ಲಿ ದೇವಾಲಯಗಳು ಹಾಗೂ ಗುರುದ್ವಾರಗಳ ನವೀಕರಣ, ದುರಸ್ತಿ, ಅಭಿವೃದ್ಧಿ ಸೇರಿ ಹಲವು ಚಟುವಟಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
ಭಾರತ-ಪಾಕಿಸ್ತಾನ ಇಬ್ಭಾಗವಾದ ಬಳಿಕ ಪಾಕಿಸ್ತಾನದಲ್ಲೇ ಉಳಿದ ಹಿಂದೂಗಳು ಹಾಗೂ ಸಿಖ್ಖರು ಸೇರಿ ವಿವಿಧ ಅಲ್ಪಸಂಖ್ಯಾತ ಸಮುದಾಯಗಳು ಈಗಲೂ ಸಂಕಷ್ಟ ಅನುಭವಿಸುತ್ತಿವೆ. ಬಹುಸಂಖ್ಯಾತ ಮುಸ್ಲಿಮರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವುದು, ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದು ಸೇರಿ ಹಲವು ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಈಗ ಸರ್ಕಾರವೇ ದೇವಾಲಯಗಳು ಹಾಗೂ ಗುರುದ್ವಾರಗಳ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ.