ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಸಂಪೂರ್ಣ ಹದಗೆಟ್ಟು ಹೋಗಿದೆ. 26 ಅಮಾಯಕ ಪ್ರವಾಸಿಗರನ್ನು ಬೀಭತ್ಸವಾಗಿ ಕೊಂದ ರೀತಿ ಪಾಕಿಸ್ತಾನ ವಿರುದ್ಧ ಭಾರತದ ರಣಾಕ್ರೋಶವನ್ನು ಸಾಬೀತು ಮಾಡಿದೆ. ಈ ಹಿನ್ನಲೆಯಲ್ಲೇ ಈಗ ಗಡಿಯಲ್ಲಿ ಯುದ್ಧದ ದಟ್ಟ ಕಾರ್ಮೋಡ ಆವರಿಸಿದೆ. ಇದನ್ನು ಮನಗಂಡ ಪಾಕ್ ತರಾತುರಿಯಲ್ಲಿ ವಿಶ್ವಸಂಸ್ಥೆ ಮೊರೆ ಹೋಗದಿದೆ. ಪಾಕ್ ದುಂಬಾಲು ಬೀಳುತ್ತಿದ್ದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಗುಪ್ತ ಸಭೆಯನ್ನು ಆಯೋಜಿಸಿತ್ತು.
ಸೋಮವಾರ ಮಧ್ಯಾಹ್ನ ಆರಂಭವಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುಪ್ತ ಸಭೆ ಬರೋಬ್ಬರಿ ಒಂದೂವರೆ ಗಂಟೆಗಳ ಚರ್ಚೆಗೆ ಸಾಕ್ಷಿಯಾಯಿತು. ವಿಪರ್ಯಾಸ ಅಂದರೆ, ಸಭೆಯಲ್ಲಿ ಪಾಕಿಸ್ತಾನವನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ. ಯಾವುದೇ ಮಹತ್ವದ ಅಗೀಕಾರವನ್ನೂ ಕೈಗೊಳ್ಳಲಾಗಿಲ್ಲ. ಹಾಗಂತ ಈ ಬಗ್ಗೆ ವಿಶ್ವಸಂಸ್ಥೆ ಯಾವುದೇ ರೀತಿಯ ಅಧಿಕೃತ ಹೇಳಿಕೆಯನ್ನೂ ರಿಲೀಸ್ ಮಾಡಿಲ್ಲ.
ಸಭೆಯಲ್ಲಿ, ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕರ್, ಉಪಸ್ಥಿತರಿದ್ದರು. ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಕಠಿಣಾತಿ ಕಠಿಣ ಸವಾಲುಗಳನ್ನು ಪಾಕ್ ಗೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲಾ ಈ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಪಾಕ್ ರಾಯಬಾರಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಅಷ್ಟೇ ಪಹಲ್ಗಾಮ್ ನಲ್ಲಿ ಧರ್ಮ ಕೇಳಿ ಹತ್ಯೆ ಮಾಡಿರೋ ವಿಚಾರವೂ ಪ್ರಸ್ತಾಪವಾಗಿದ್ದು, ಇದಕ್ಕೆ ಸದಸ್ಯ ರಾಷ್ಟ್ರಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲಾ ಇದರಲ್ಲಿ ಪಾಕಿಸ್ತಾನದ ಪಾತ್ರವೇನು, ಲಷ್ಕರ್ ಎ ತೋಯ್ಬಾದ ಕೈವಾಡವೇನು ಅಂತಲೂ ಪ್ರಶ್ನಿಸಿದ್ದಾರೆ. ಆದ್ರೆ ಪಾಕಿಸ್ತಾನ ಮಾತ್ರ ದಾಳಿಯ ಹಿಂದೆ ತಮ್ಮ ಪಾತ್ರವಿಲ್ಲ ಅಂತಲೇ ಸಬೂಬು ನೀಡಿದೆ ಎನ್ನಲಾಗುತ್ತಿದ್ದು, ಇದಕ್ಕೆ ಸದಸ್ಯ ರಾಷ್ಟ್ರಗಳು ಅಸಂತೃಪ್ತಿ ವ್ಯಕ್ತಪಡಿಸಿವೆ.
ಸುಳ್ಳುಗಳ ಸರಮಾಲೆ ಪೋಣಿಸಿದ ಪಾಕ್
ಈ ಸಭೆಯಲ್ಲಿ ಪಾಕಿಸ್ತಾನ ನಿರಂತರವಾಗಿ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿದೆ. ವಿನಾಕಾರಣ ಸಿಂಧು ನದಿ ನೀರನ್ನು ನಿಲ್ಲಿಸಲಾಗಿದೆ ಅಂತಾ ಪಾಕ್ ಕತೆ ಕಟ್ಟಿದೆ. ವಾಸ್ತವಾಂಶವನ್ನು ಮುಚ್ಚಿಟ್ಟು, ಉಭಯ ದೇಶಗಳ ಶಾಂತಿಯನ್ನು ಕದಡುವ ಕಾರ್ಯ ಭಾರತದಿಂದ ಆಗ್ತಿದೆ ಅಂತಾ ನುಡಿದಿದೆ. ಅಷ್ಟೇ ಅಲ್ಲಾ ಅಟ್ಟಾರಿ ಗಡಿಯನ್ನು ಮುಚ್ಚುವ ಮೂಲಕ ಅಮಾಯಕ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಇದು ಭಾರತದ ರಾಜತಾಂತ್ರಿಕ ನೀತಿಯನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದೆ ಅಂತಾ ಪಾಕ್ ವಾದಿಸಿದೆ. ಆದರೆ, ಪಾಕಿಸ್ತಾನದ ಈ ಆರೋಪಗಳಿಗೆ ವಿಶ್ವಸಂಸ್ಥೆ ಯಾವುದೇ ಸೊಪ್ಪುಹಾಕಿಲ್ಲ ಎನ್ನಲಾಗುತ್ತಿದೆ.
- ಪ್ರತೀಕ್ ಆಲೂರ



















