ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಭಾರತ ಮತ್ತೆ ದಾಳಿ ಮಾಡುವ ಭೀತಿಯಲ್ಲಿರುವ ಪಾಕಿಸ್ತಾನವು ರಾಜಸ್ಥಾನ ಗಡಿಯಲ್ಲಿರುವ ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡುತ್ತಿದೆ ಎಂದು ತಿಳಿದುಬಂದಿದೆ. ಭಾರತವು ಮತ್ತೆ ದಾಳಿ ಮಾಡುವ ಸಾಧ್ಯತೆಯನ್ನು ಮನಗಂಡು ಪಾಕಿಸ್ತಾನ ಇಂತಹ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ ಗಡಿ ಭಾಗದ, ಪಾಕಿಸ್ತಾನದ ಚಕ್ 95 ಎಚ್ ಬಿ ಹಾಗೂ ಚಕ್ 96 ಎಚ್ ಬಿ ಗ್ರಾಮಗಳ ಜನರನ್ನು ಪಾಕಿಸ್ತಾನವು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಸೇನಾಪಡೆಗಳು ಬಹವಾಲ್ಪುರ ಜಿಲ್ಲೆಯ ಹಲವೆಡೆ ದಾಳಿ ನಡೆಸಿದ ಕಾರಣ ಪಾಕಿಸ್ತಾನಕ್ಕೆ ಭೀತಿ ಎದುರಾಗಿದೆ. ಹಾಗಾಗಿ, ಇದೇ ಜಿಲ್ಲೆಯ ನಾಗರಿಕರನ್ನು ಸ್ಥಳಾಂತರ ಮಾಡಿದೆ ಎಂದು ತಿಳಿದುಬಂದಿದೆ.
ಯುದ್ಧ ತಪ್ಪಿಸಿಕೊಳ್ಳಲು ಪಾಕ್ ಶತಪ್ರಯತ್ನ
ಭಾರತದ ವಿರುದ್ಧ ಯುದ್ಧ ಮಾಡಿ ಗೆಲ್ಲುತ್ತೇವೆ ಎಂಬ ಉದ್ಧಟತನದ ಹೇಳಿಕೆ ನೀಡುತ್ತಿದ್ದ ಪಾಕಿಸ್ತಾನವು ಆಪರೇಷನ್ ಸಿಂದೂರದ ಬಳಿಕ ಮೆತ್ತಗಾಗಿದೆ. “ಆಪರೇಷನ್ ಸಿಂದೂರದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಪೂರ್ಣಪ್ರಮಾಣದ ಯುದ್ಧ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಇಂತಹ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ” ಎಂದು ಪಾಕ್ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹೈ ಅಲರ್ಟ್
ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನದ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಕಾರಣ ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ, ಕಣಿವೆಯ 10 ಜಿಲ್ಲೆಗಳಲ್ಲಿ ಕಂಟ್ರೋಲ್ ರೂಮ್ ರಚಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆಯೂ ಪಾಕಿಸ್ತಾನದ ಸೈನಿಕರು ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.



















