ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಸಿದ್ಧತೆ ನಡೆಸುತ್ತಿದೆ. ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ಜತೆಗಿನ ತ್ರಿಕೋನ ಸರಣಿಯಲ್ಲಿ ಭಾಗಿಯಾಗುತ್ತಿದೆ. ಅಂತೆಯೇ ಫೆಬ್ರವರಿ 12ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಕೊನೆ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆಡಿದೆ. ಈ ವೇಳೆ ಅತಿರೇಕದಿಂದ ವರ್ತಿಸಿದ ಪಾಕ್ ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಹಂತ-1 ಉಲ್ಲಂಘನೆ ಮಾಡಿರುವ ಶಾಹೀನ್ ಅಫ್ರಿದಿ, ಸೌದ್ ಶಕೀಲ್, ಕಮ್ರಾನ್ ಗುಲಾಮ್ ಗೆ ದಂಡ ಹಾಕಲಾಗಿದೆ.
ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ, ಆಟಗಾರರ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ (ಪ್ರೇಕ್ಷಕ ಸೇರಿದಂತೆ) ಅನುಚಿತ ವರ್ತನೆ ತೋರಿದ ವೇಗಿ ಶಾಹೀನ್ ಶಾ ಅಫ್ರಿದಿ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ . ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯ 28ನೇ ಓವರ್ನಲ್ಲಿ ವೇಗಿ ಶಾಹೀನ್ ಶಾ ಅಫ್ರಿದಿ ಅವರು ಉದ್ದೇಶಪೂರ್ವಕವಾಗಿಯೇ ಬ್ಯಾಟರ್ ಮ್ಯಾಥ್ಯೂ ಬ್ರಿಟ್ಜ್ಕೆ ಗೆ ಮೈ ತಾಗಿಸಿ ಅಡ್ಡಿ ಮಾಡಿದ್ದರು.
ಶಕೀಲ್, ಗುಲಾಮ್ಗೆ ಶೇ 10ರಷ್ಟು ದಂಡ
ಮರು ಓವರ್ನಲ್ಲೇ ಶಕೀಲ್ ಮತ್ತು ಗುಲಾಮ್ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರನ್ನು ಔಟ್ ಮಾಡಿ ವಿಚಿತ್ರವಾಗಿ ಸಂಭ್ರಮಿಸಿದ್ದರು. 96 ಎಸೆತಗಳಲ್ಲಿ 13 ಬೌಂಡರಿ ಸಹಿತ 86 ರನ್ ಸಿಡಿಸಿದ್ದ ಬವುಮಾ, 28.5ನೇ ಓವರ್ನಲ್ಲಿ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆದರು. ಈ ರನೌಟ್ ಮಾಡಿದ ಸೌದ್ ಶಕೀಲ್ ಜೊತೆಗೆ ಗುಲಾಮ್ ಅವರು ಬವುಮಾ ಮುಖದ ಬಳಿ ಅತಿಯಾಗಿ ವರ್ತಿಸಿದರು. ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ವಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಯಿತು.
ಇಬ್ಬರೂ ಆಟಗಾರರು ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ ಎಂದು ಐಸಿಸಿ ತಿಳಿಸಿದೆ. ದಂಡದ ಜತೆಗೆ ಮೂವರು ಆಟಗಾರರಿಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಲಾಗಿದೆ.
ದೊಡ್ಡ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್ಗಳ ಬೃಹತ್ ಮೊತ್ತ ಪೇರಿಸಿತು. ನಾಯಕ ಟೆಂಬಾ ಬವುಮಾ 82, ಮ್ಯಾಥ್ಯೂ ಬ್ರೀಟ್ಜ್ಕೆ 83, ಹೆನ್ರಿಚ್ ಕ್ಲಾಸೆನ್ 87 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 49 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿತು. ಮೊಹಮ್ಮದ್ ರಿಜ್ವಾನ್ ಅಜೇಯ 122 ರನ್, ಸಲ್ಮಾನ್ ಆಘಾ 134 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಪಾಕಿಸ್ತಾನ ಚೇಸ್ ಮಾಡಿದ ಗರಿಷ್ಠ ಮೊತ್ತ.