ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ್ ವನಿತೆಯರು ಬಹುತೇಕ ಫೈನಲ್ ಪ್ರವೇಶ ಮಾಡಿದ್ದಾರೆ.
ಯುಎಇ ಮಹಿಳಾ ತಂಡವನ್ನು 10 ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಮಹಿಳಾ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿರುವ ಪಾಕ್ ಪಡೆ 2 ಗೆಲುವು ಹಾಗೂ 1 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್ ಗಳ ಹೀನಾಯ ಸೋಲು ಕಂಡಿದ್ದ ಪಾಕ್ ತಂಡ, ನಂತರದ ಎರಡೂ ಪಂದ್ಯಗಳನ್ನು ಗೆದ್ದಿದೆ.
ಎರಡನೇ ಪಂದ್ಯದಲ್ಲಿ ನೇಪಾಳ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದ್ದ ಪಾಕ್ ಪಡೆ, ಮೂರನೇ ಪಂದ್ಯದಲ್ಲಿ ಯುಎಇ ವಿರುದ್ಧ 10 ವಿಕೆಟ್ ಗಳ ಜಯ ಕಂಡಿದೆ. ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟ ನೀಡಿತು. ಆದರೆ ಇದಕ್ಕೆ 7 ಓವರ್ಗಳನ್ನು ತೆಗೆದುಕೊಂಡಿತು. ಆ ಬಳಿಕ ತಂಡದಿಂದ ಯಾವುದೇ ಉತ್ತಮ ಜೊತೆಯಾಟ ಕಂಡು ಬರಲಿಲ್ಲ. ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಹೀಗಾಗಿ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 103 ರನ್ ಮಾತ್ರ ಗಳಿಸಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ತೀರ್ಥ ಸತೀಶ್, 36 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್ ಗಳಿಸಿದರು.
ನಾಯಕಿ ಇಶ ಓಝಾ ಹಾಗೂ ಖುಷಿ ಶರ್ಮಾ ಕ್ರಮವಾಗಿ 16 ಹಾಗೂ 12 ರನ್ ದಾಖಲಿಸಿ ಎರಡಂಕಿ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಯಾವೊಬ್ಬ ಆಟಗಾರರು ಕೂಡ ಉತ್ತಮ ರನ್ ಗಳಿಸಲು ವಿಫಲರಾದರು. ಹೀಗಾಗಿ ಯುಎಇ ತಂಡ ಅಲ್ಪ ರನ್ ಗಳಿಗೆ ಕುಸಿಯಿತು. ಪಾಕಿಸ್ತಾನ ಪರ ಸಾದಿಯಾ ಇಕ್ಬಾಲ್, ನಶ್ರಾ ಸಂಧು ಹಾಗೂ ತುಬಾ ಹಾಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಯುಎಇ ನೀಡಿದ 103 ರನ್ ಗಳ ಅಲ್ಪ ರನ್ ಬೆನ್ನತ್ತಿದ ಪಾಕ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಯುಎಇಗೆ ಒಂದೇ ಒಂದು ವಿಕೆಟ್ ಪಡೆಯುವ ಅವಕಾಶ ನೀಡಲಿಲ್ಲ. ಕೇವಲ 14.1 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಗುಲ್ ಫಿರೋಜಾ 55 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇತ 62 ರನ್ ಗಳಿಸಿದರೆ, ಮುನೀಬ ಅಲಿ 30 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 37 ರನ್ ಗಳಿಸಿದರು.