ನವದೆಹಲಿ: ಸತತ ಹಲವು ದಿನಗಳ ಕಾಲ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಸೇನೆಯು ಮಂಗಳವಾರ ರಾತ್ರಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗಡಿಯಲ್ಲೂ ಗುಂಡಿನ ದಾಳಿ ನಡೆಸಿದೆ. ಜಮ್ಮುವಿನ ಪರಾಗ್ವಾಲ್ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ದಾಳಿ ನಡೆಸುವ ಮೂಲಕ ಉದ್ಧಟತನ ಮೆರೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇದಲ್ಲದೇ ಪಾಕಿಸ್ತಾನ ಸೇನೆಯು ಮಂಗಳವಾರ ಗಡಿಯ ನಿಯಂತ್ರಣ ರೇಖೆಯ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಗುಂಡು ಹಾರಿಸಿದೆ. ಈ ಮೂಲಕ ಸತತ 6ನೇ ದಿನ ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ನಡೆಸಿದಂತಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಯ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಗಡಿಯಲ್ಲೂ ಗುಂಡಿನ ಚಕಮಕಿ ನಡೆಯುತ್ತಿರುವುದು ಆತಂಕ ಮೂಡಿಸಿದೆ.
ಅಂತಾರಾಷ್ಟ್ರೀಯ ಗಡಿಯ ಪರಾಗ್ವಾಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಪಡೆಯು ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಪಡೆಗಳು ತ್ವರಿತವಾಗಿ ಪ್ರತಿ ದಾಳಿ ನಡೆಸಿದೆ. ಜೊತೆಗೆ ಗಡಿಯಲ್ಲಿ ಹೆಚ್ಚುವರಿ ಬಿಎಸ್ಎಫ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಬೀಡುಬಿಟ್ಟಿರುವ ಭಾರತೀಯ ಸೇನಾ ಪಡೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಕದನ ವಿರಾಮ ಉಲ್ಲಂಘನೆಯ ಬಗ್ಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ (ಡಿಜಿಎಂಒ) ವಿವರಿಸಿವೆ ಎಂದು ಮೂಲಗಳು ತಿಳಿಸಿವೆ.
ನಿಯಂತ್ರಣ ರೇಖೆಯ ಉದ್ದಕ್ಕೂ, ರಜೌರಿ ಜಿಲ್ಲೆಯ ನೌಶೇರಾ ಮತ್ತು ಸುಂದರ್ಬಾನಿ ಸೆಕ್ಟರ್‌ಗಳು, ಜಮ್ಮುವಿನ ಅಖ್ನೂರ್ ಸೆಕ್ಟರ್ ಮತ್ತು ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಹಲವು ಸುತ್ತಿನ ಗುಂಡಿನ ದಾಳಿ ನಡೆದಿದೆ. ಗಡಿಯುದ್ದಕ್ಕೂ ಭದ್ರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಪಡೆಗಳೂ ಪಾಕ್ ಗೆ ತಕ್ಕ ಪ್ರತ್ಯುತ್ತರವನ್ನು ನೀಡಿವೆ.
ಕದನ ವಿರಾಮ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಸುಮಾರು 20 ಪಾಕಿಸ್ತಾನಿ ಪೋಸ್ಟ್‌ಗಳ ವೀಡಿಯೊಗಳು ಮತ್ತು ಚಿತ್ರಗಳು ಭಾರತೀಯ ಸೇನೆ ಬಳಿ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಪಾಕಿಸ್ತಾನವು ಸಣ್ಣ ಶಸ್ತ್ರಾಸ್ತ್ರಗಳಿಂದಲೇ ದಾಳಿ ನಡೆಸುತ್ತಿದ್ದು, ಫಿರಂಗಿ ಮತ್ತು ಏರ್ ಡಿಫೆನ್ಸ್ ಗನ್‌ಗಳನ್ನು ಇಲ್ಲಿಯವರೆಗೆ ಬಳಸಲಾಗಿಲ್ಲ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಅನಂತನಾಗ್, ಪುಲ್ವಾಮಾ ಮತ್ತು ಶೋಪಿಯಾನ್ ಒಳನಾಡಿನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗಳು ಮುಂದುವರಿದಿವೆ. ಭದ್ರತಾ ಪಡೆಗಳನ್ನು ಪರ್ವತ ಪ್ರದೇಶಗಳ ಮೇಲೆ ನಿಯೋಜಿಸಲಾಗಿದ್ದು, ಈ ಪಡೆಗಳು ಒಂದೊಂದೇ ಪ್ರದೇಶಗಳನ್ನು ತೆರವುಗೊಳಿಸುತ್ತಾ ಹತ್ತಿರಕ್ಕೆ ಸಾಗುತ್ತಿವೆ. ಇನ್ನೊಂದೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ಉಗ್ರರ ಸಂಘಟನೆಗಳ ನಂಟಿರುವ ಓವರ್ ಗ್ರೌಂಡ್ ವರ್ಕರ್ ಗಳು ಸೇರಿದಂತೆ ಎಲ್ಲರ ಮನೆಗಳನ್ನು ತಪಾಸಣೆ ಮಾಡುವ ಮತ್ತು ಅವರ ಸಂಪರ್ಕಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ದಾಳಿಯ ನಂತರ, ವ್ಯವಸ್ಥಿತವಾಗಿ ಹಾಗೂ ಅಪ್ರಚೋದಿತವಾಗಿ ಪಾಕಿಸ್ತಾನವು ಭಾರತೀಯ ಸೇನೆಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿವೆ. ಇದಕ್ಕೆ ಭಾರತೀಯ ಪಡೆಗಳೂ ತಕ್ಕ ಪ್ರತ್ಯುತ್ತರ ನೀಡುತ್ತಿವೆ.



















