ಮುಜಾಫರ್‌ನಗರ: ವ್ಯಕ್ತಿಯೊಬ್ಬ ನಿದ್ದೆಯಲ್ಲಿದ್ದಾಗಲೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಮರ್ಮಾಂಗವನ್ನು ಕಿತ್ತು ಆತನನ್ನು ಹೆಣ್ಣಾಗಿ ಬದಲಿಸಿದ್ದಾರೆ. ಸ್ನೇಹಿತ ಎಂದು ಕೊಂಡಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಮೆಡಿಕಲ್ ಕಾಲೇಜಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆ ಖಂಡಿಸಿ ಭಾರತೀಯ ಕಿಸಾನ್ ಯೂನಿಯನ್ ಪ್ರತಿಭಟನೆ ನಡೆಸಿದೆ. 20 ವರ್ಷದ ಮುಜಾಹಿದ್ ಎಂಬ ವ್ಯಕ್ತಿಯೇ ಸ್ನೇಹಿತನ ಕುತಂತ್ರದಿಂದ ಹೆಣ್ಣಾಗಿ ಬದಲಾದವರು. ಸಂಜಕ್ ಗ್ರಾಮದ ನಿವಾಸಿಯಾದ 20 ವರ್ಷದ ಮುಜಾಹಿದ್ ಗೆ ಗೆಳೆಯ ಓಂಪ್ರಕಾಶ್ ಎಂಬಾತ ವೈದ್ಯರ ನರೆವಿನಿಂದ ಈ ರೀತಿ ಲಿಂಗ ಬದಲಿಸಿದ್ದು, ಈಗ ಆತನನ್ನೇ ಮದುವೆಯಾಗಲು ಮುಂದಾಗಿದ್ದಾನೆ ಎನ್ನಲಾಗಿದೆ.
ಮುಜಾಹಿದ್ ಗೆ ವೈದ್ಯಕೀಯ ಸಮಸ್ಯೆಯಿದೆ ಎಂದು ಹೇಳಿ ಓಂಪ್ರಕಾಶ್ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರ ಬಳಿ ಈತ ಮೊದಲೇ ಮಾತನಾಡಿದ್ದು, ಲಿಂಗ ಬದಲಿಸಿ ಹೆಣ್ಣಾಗಿ ಬದಲಿಸುವಂತೆ ಕೇಳಿದ್ದಾನೆ. ಅದರಂತೆ ಹಣದ ಆಮಿಷಕ್ಕೆ ಒಳಗಾದ ವೈದ್ಯರು ಮುಜಾಹಿದ್‌ಗೆ ಶಸ್ತ್ರಚಿಕಿತ್ಸೆ ನಡೆಸಿ, ಹೆಣ್ಣಾಗಿಸಿದ್ದಾರೆ.
ಓಂಪ್ರಕಾಶ್ ಕಳೆದೆರಡು ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಆರೋಪಿಸಿದ್ದಾರೆ. ಈಗ ಓಂಪ್ರಕಾಶ್ ಬಗ್ಗೆ ಗಂಭೀರ ಆರೋಪ ಮಾಡಿರುವ ಮುಜಾಹಿದ್, ಇನ್ನು ಮುಂದೆ ನೀನು ನನ್ನ ಜೊತೆಯೇ ವಾಸ ಮಾಡಬೇಕು. ನಾನು ಒಬ್ಬರು ವಕೀಲರ ಜೊತೆ ಮಾತನಾಡಿದ್ದು, ನಿನಗಾಗಿ ಕೋರ್ಟ್ ಮ್ಯಾರೇಜ್‌ಗೆ ವ್ಯವಸ್ಥೆ ಮಾಡಿದ್ದೇನೆ. ನೀನ್ನ ತಂದೆಯನ್ನು ಕೊಲೆ ಮಾಡುತ್ತೇನೆ. ಆಗ ಆಸ್ತಿ ನನಗೆ ಬರಲಿದೆ. ಆಸ್ತಿ ಮಾರಿ ಲಕ್ನೋಗೆ ಹೋಗುವೆ ಎಂದು ಹೇಳಿದ್ದಾನೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರೈತ ಮುಖಂಡ ಶ್ಯಾಮ್ ಪಾಲ್ ನೇತೃತ್ವದ ಬಿಕೆಯು ಸಂಘಟನೆಯ ಸದಸ್ಯರು ಮೆಡಿಕಲ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ್ದು, ಓಂ ಪ್ರಕಾಶ್ ಹಾಗೂ ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓಂಪ್ರಕಾಶ್‌ನನ್ನು ಬಂಧಿಸಿದ್ದಾರೆ.
