ಬೆಂಗಳೂರು : ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಕಾರ್ಡ್ ಎಂಬುದು ಪ್ರಮುಖ ಗುರುತಿನ ಚೀಟಿಯಾಗಿದೆ. ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವುದರಿಂದ ಹಿಡಿದು, ಬ್ಯಾಂಕ್ ಖಾತೆ ತೆರೆಯುವುದು ಸೇರಿ ಹತ್ತಾರು ಕೆಲಸಗಳಿಗೆ ಆಧಾರ್ ಕಾರ್ಡ್ ಪ್ರಮುಖವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸರ್ಕಾರದ ಯೋಜನೆಗಳನ್ನು ಪಡೆಯಲು ಆಗುವುದಿಲ್ಲ. ಇದರ ಮಧ್ಯೆಯೇ, ಕೇಂದ್ರ ಸರ್ಕಾರವು 2.5 ಕೋಟಿ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.
ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರವು (UIDAI) ಮೃತಪಟ್ಟವರ ಆಧಾರ್ ಕಾರ್ಡ್ ಗಳನ್ನು ಮಾತ್ರ ನಿಷ್ಕ್ರಿಯಗೊಳಿಸಿದೆ. ಆಧಾರ್ ಡೇಟಾಬೇಸ್ ನಲ್ಲಿ ಪಾರದರ್ಶಕತೆ ಕಾಪಾಡಲು ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದರಿಂದ ಬೇರೊಬ್ಬರ ಆಧಾರ್ ಕಾರ್ಡ್ ಗಳನ್ನು ದುರ್ಬಳಕೆ ಮಾಡಿಕೊಳ್ಳುವುದು, ವಂಚನೆ ಮಾಡುವುದನ್ನು ತಡೆಯಬಹುದಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಧಾರ್ ಕಾರ್ಡ್ ಹೊಂದಿರುವವರು ಮೃತಪಟ್ಟರೆ, ಕೂಡಲೇ ಅವುಗಳನ್ನು ಡಿ-ಆ್ಯಕ್ಟಿವೇಟ್ ಮಾಡುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ, ಅವರ ಆಧಾರ್ ಕಾರ್ಡ್ ಬಳಸಿಕೊಂಡು ಮಾಹಿತಿ ಕಳ್ಳತನ, ದುಡ್ಡಿನ ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, UIDAI ದೇಶಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ ಎಂಬುದಾಗಿ ಸರ್ಕಾರ ತಿಳಿಸಿದೆ.
ದೇಶದಲ್ಲಿ ಈಗ 134 ಕೋಟಿ ಜನರ ಬಳಿ ಆಧಾರ್ ಕಾರ್ಡ್ ಗಳು ಇವೆ. ಸಣ್ಣ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಯಾರೇ ಆಗಲಿ, ಆಧಾರ್ ಕಾರ್ಡ್ ಮಾಡಿಸುವವರಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಇಲ್ಲೂ ಕೂಡ ವೈಯಕ್ತಿಕ ಮಾಹಿತಿ ಸೋರಿಕೆ, ನಕಲಿ ತಡೆಗಾಗಿ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಜಾರಿಗೆ ತಂದಿದೆ.
ಇದನ್ನೂ ಓದಿ : ಬೆಂಗಳೂರು ಏರ್ಪೋರ್ಟ್ನಲ್ಲಿ 8 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ | ಇಬ್ಬರ ಬಂಧನ



















