ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರು ವಿಧಾನಸಭೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಮೇಲೆ ಪೇಪರ್ ಎಸೆದು ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸಭೆಯ ಅಧಿವೇಶನದ ಕಡೆಯ ದಿನ. ಹೀಗಾಗಿ ಬೆಳಗ್ಗೆ ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಅಶೋಕ್ ಮತ್ತು ಸುನಿಲ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಸಚಿವರೇ ಹನಿಟ್ರ್ಯಾಪ್ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಲಾಯಿತು.
ಜಡ್ಜ್‌ಗಳ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಿಎಂ ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಿಎಂ ಬಜೆಟ್ ಮೇಲಿನ ಭಾಷಣಕ್ಕೆ ಮುಂದಾದರು. ಆಗ ವಿಪಕ್ಷ ನಾಯಕರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಆದರೂ ಸಿಎಂ ತಮ್ಮ ಭಾಷಣ ನಡೆಸಿದರು. ಸಿಎಂ ಭಾಷಣದ ನಂತರ ಸರ್ಕಾರ ಹಲವು ಮಸೂದೆಗಳಿಗೆ ಅಂಗೀಕಾರವನ್ನು ಪಡೆದುಕೊಂಡಿತು. ಆಗ ಬಿಜೆಪಿ ಸದಸ್ಯರು ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಮಸೂದೆಗಳ ಪ್ರತಿಯನ್ನು ಸ್ಪೀಕರ್ ಮೇಲೆ ಎಸೆದು ಆಕ್ರೋಶ ಹೊರ ಹಾಕಿದರು. ಆಗ ಸ್ಪೀಕರ್ ಕಲಾಪ ಮುಂದಕ್ಕೆ ಹಾಕಿದರು.