ಬೆಂಗಳೂರು: ಶರಾವತಿ ಸಿಂಗಳೀಕ ಅಭಯಾರಣ್ಯ ಕೇಂದ್ರ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನ ಶರಾವತಿ ನದಿಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ಉದೇಶ ಇದಾಗಿದ್ದು, ಈಗಾಗಲೇ ಮಲೆನಾಡು ಭಾಗದಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಇಂದು ಬೆಂಗಳೂರಿನಲ್ಲಿ ಸಹ ಗ್ರೀನ್ ಫ್ರೀಡಂ (Green Freedom ) ಬೈಕ್ ಜಾಥಾ ನಡೆಸುವುದರ ಮೂಲಕ ಶರಾವತಿ ಉಳಿಸಿ ಆಂದೋಲನ ನಡೆಸಲಾಯಿತು. ನಗರದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಬೈಕರ್ಸ್ ಆಂದೋಲನದಲ್ಲಿ ಭಾಗಿಯಾಗಿದ್ದರು. ಬೈಕರ್ಸ್ Save_Sharavathi ಎಂಬ ಹ್ಯಾಶ್‌ಟ್ಯಾಗ್ ಹಾಗೂ ‘SaynotoSharavathipsp’ ಎಂಬ ಭಿತ್ತಿಪತ್ರಗಳನ್ನು ಹಿಡಿದು, ನದಿಯ ಮೇಲೆ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ವಿರೋಧಿಸಿ ಜಾಗೃತಿ ಮೂಡಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ನಿಂದ ಪಶ್ಚಿಮ ಘಟ್ಟಗಳಲ್ಲಿನ ಅಮೂಲ್ಯ ಪರಿಸರ ವ್ಯವಸ್ಥೆ ಮತ್ತು ಅರಣ್ಯ ನಾಶವಾಗುತ್ತದೆ. ಶರಾವತಿ ನದಿ ಕೇವಲ ಉತ್ತರಕನ್ನಡ ಜಿಲ್ಲೆಗೆ ಸೀಮಿತವಲ್ಲ, ಇದು ಕರ್ನಾಟಕದ ಜೀವನಾಡಿ. ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹೀಗಾಗಿ ಪರಿಸರ ಉಳಿಸುವ ಮತ್ತು ಶರಾವತಿ ನದಿಗೆ ಯಾವುದೇ ಹೊಸ ಯೋಜನೆಗಳ ಪ್ರಸ್ತಾಪ ಬೇಡ ಎಂದು ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನು ಶರಾವತಿ ಉಳಿಸಿ ಆಂದೋಲನಕ್ಕೆ ಬೆಂಗಳೂರಿನಿಂದಲೂ ಬೆಂಬಲ ವ್ಯಕ್ತವಾಗಿದೆ.