ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ “ಆಪರೇಷನ್ ಸಿಂದೂರ” ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸುವ ಮೂಲಕ ವಿಪಕ್ಷಗಳು “ದೊಡ್ಡ ತಪ್ಪು” ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು (ಮಂಗಳವಾರ) ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಕಳೆದ ವಾರ ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂದೂರ ಚರ್ಚೆಯಲ್ಲಿ ವಿರೋಧ ಪಕ್ಷಗಳು “ತೀವ್ರವಾಗಿ ಪರಾಭವಗೊಂಡಿವೆ” ಮತ್ತು “ತಮ್ಮ ಕಾಲಿಗೆ ತಾವೇ ಗುಂಡು ಹೊಡೆದುಕೊಂಡಿವೆ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಅಲ್ಲದೆ, ವಿಪಕ್ಷಗಳು “ಸ್ವಯಂ-ಹಾನಿ” ಮಾಡಿಕೊಳ್ಳುವಲ್ಲಿ ನಿರತವಾಗಿವೆ ಎಂದೂ ಹೇಳಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಸರ್ಕಾರ ರಚನೆಯಾದ ನಂತರ ಸಂಸತ್ ಅಧಿವೇಶನದ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ನಡೆಸಿದ ಎರಡನೇ ಪ್ರಮುಖ ಸಭೆ ಇದಾಗಿದೆ.
ಮೋದಿಗೆ ಅಭಿನಂದನೆ
ಎನ್‌ಡಿಎ ಸಂಸದೀಯ ಸಭೆ ಆರಂಭವಾಗುತ್ತಲೇ, ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಮೇ 7ರಂದು “ಆಪರೇಷನ್ ಸಿಂದೂರ” ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಎಲ್ಲ ಸಂಸದರೂ ಅಭಿನಂದನೆ ಸಲ್ಲಿಸಿದರು. ಪ್ರಧಾನಿ ಮೋದಿಯವರ “ಅಸಾಧಾರಣ ನಾಯಕತ್ವ”ವನ್ನು ಶ್ಲಾಘಿಸಿ, ಅಭಿನಂದಿಸಿದರು.
“ಮೋದಿಯವರ ಅಚಲ ಸಂಕಲ್ಪ, ದೂರದೃಷ್ಟಿಯ ರಾಜತಾಂತ್ರಿಕತೆ ಮತ್ತು ದೃಢವಾದ ಆದೇಶವು ರಾಷ್ಟ್ರವನ್ನು ಒಂದು ನಿರ್ದಿಷ್ಟ ಉದ್ದೇಶದಿಂದ ಮುನ್ನಡೆಸಿದ್ದಲ್ಲದೆ, ಎಲ್ಲಾ ಭಾರತೀಯರ ಹೃದಯದಲ್ಲಿ ಏಕತೆ ಮತ್ತು ಹೆಮ್ಮೆಯ ಹೊಸ ಚೈತನ್ಯವನ್ನು ಮೂಡಿಸಿದೆ” ಎಂಬ ನಿರ್ಣಯವನ್ನೂ ಸಂಸದರು ಅಂಗೀಕರಿಸಿದರು.
ಸಶಸ್ತ್ರ ಪಡೆಗಳಿಗೆ ಸಲಾಂ
“ಆಪರೇಷನ್ ಸಿಂದೂರ” ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿದ “ಧೈರ್ಯ ಮತ್ತು ಅಚಲ ಬದ್ಧತೆ”ಗೆ ಸಂಸದರು ಸಲಾಂ ಸಲ್ಲಿಸಿದರು. ಈ ಕಾರ್ಯಾಚರಣೆಯು ಭಯೋತ್ಪಾದಕ ಶಿಬಿರಗಳ ಮೇಲೆ “ಉದ್ವಿಗ್ನತೆ ಹೆಚ್ಚಿಸದ, ನಿಖರ ಮತ್ತು ಉದ್ದೇಶಿತ ದಾಳಿ”ಯಾಗಿತ್ತು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. “ಇದು ಶಾಂತಿಗೆ ಭಾರತದ ಬದ್ಧತೆ, ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ಮತ್ತು ಅಗತ್ಯಬಿದ್ದರೆ ಭಯೋತ್ಪಾದಕ ಮೂಲಸೌಕರ್ಯವನ್ನು ಬೇರುಸಹಿತ ಕಿತ್ತೊಗೆಯಲು ಏನು ಬೇಕಾದರೂ ಮಾಡುವ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ” ಎಂದು ಹೇಳಲಾಗಿದೆ.
ಇದೇ ವೇಳೆ, ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರಿಗೆ ಸಂಸದರು ಸಂತಾಪ ಸೂಚಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತದ ನಿಲುವು
“ಆಪರೇಷನ್ ಸಿಂದೂರ”ದ ನಂತರ ಪ್ರಧಾನಿ ಮೋದಿಯವರು ಕೈಗೊಂಡ ಜಾಗತಿಕ ಸಂಪರ್ಕ ಪ್ರಯತ್ನಗಳನ್ನೂ ಶ್ಲಾಘಿಸಲಾಯಿತು. ಕಾರ್ಯಾಚರಣೆಯ ಬಳಿಕ ಮೋದಿಯವರು ಭಾರತದ ನಿಲುವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಲು ಸರ್ವಪಕ್ಷಗಳ 59 ಸಂಸದರ ನಿಯೋಗಗಳನ್ನು 32 ದೇಶಗಳಿಗೆ ಕಳುಹಿಸಿಕೊಟ್ಟಿದ್ದು, ಭಾರತವು ಕೈಗೊಂಡ ಅತ್ಯಂತ ವ್ಯಾಪಕ ಜಾಗತಿಕ ಸಂಪರ್ಕಗಳಲ್ಲಿ ಒಂದಾಗಿದೆ. ಭಾರತವು ಹೇಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಮತ್ತು ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಭಯೋತ್ಪಾದಕ ದಾಳಿಯು ಇಡೀ ಮನುಕುಲದ ವಿರುದ್ಧದ ಅಪರಾಧ ಎಂಬುದನ್ನು ಈ ನಿಯೋಗಗಳು ಎತ್ತಿ ತೋರಿಸಿವೆ” ಎಂದೂ ನಿರ್ಣಯದಲ್ಲಿ ವಿವರಿಸಲಾಗಿದೆ.



















