‘
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಮತ ಕಳ್ಳತನ(ವೋಟ್ ಚೋರಿ) ಆರೋಪದ ಬೆನ್ನಲ್ಲೇ, ಇದೇ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ವಾಗ್ದಂಡನೆ ನೋಟಿಸ್ (Impeachment Notice) ನೀಡಲು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಗಢಿ, “ನಾವು ಶೀಘ್ರದಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ. ಆದಾಗ್ಯೂ, ಸಿಇಸಿಯನ್ನು ವಜಾಗೊಳಿಸಲು ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದ್ದು, ವಿರೋಧ ಪಕ್ಷಗಳು ಪ್ರಸ್ತುತ ಆ ಸಂಖ್ಯೆಯನ್ನು ಹೊಂದಿಲ್ಲ ಎಂಬುದು ಗಮನಾರ್ಹ.
ಭಾನುವಾರವಷ್ಟೇ ಕಾಂಗ್ರೆಸ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಚುನಾವಣಾ ಅಕ್ರಮದ ಆರೋಪಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಳ್ಳಿಹಾಕಿದ್ದರು. ವಿಶೇಷ ಸುದ್ದಿಗೋಷ್ಠಿ ನಡೆಸಿ, ಭಾರತದ ಮತದಾನ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಸಮರ್ಥಿಸಿಕೊಂಡಿದ್ದ ಅವರು, ರಾಹುಲ್ ಗಾಂಧಿ ಅವರಿಗೆ ನೇರ ಸವಾಲು ಹಾಕಿದ್ದರು.
ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಮಾತನಾಡಿದ್ದ ಜ್ಞಾನೇಶ್ ಕುಮಾರ್, “ಕಾಂಗ್ರೆಸ್ ಸಂಸದರು ಮಂಡಿಸಿದ ‘ಪಿಪಿಟಿ ಪ್ರೆಸೆಂಟೇಶನ್’ ಮತದಾರರ ದತ್ತಾಂಶದ ತಪ್ಪು ವಿಶ್ಲೇಷಣೆಯನ್ನು ಒಳಗೊಂಡಿದೆ. ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸುವಂಥ ಅಫಿಡವಿಟ್ ಅನ್ನು ಏಳು ದಿನಗಳಲ್ಲಿ ಸಲ್ಲಿಸಬೇಕು, ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಬೇಕು” ಎಂದು ಗಡುವು ನೀಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಚುನಾವಣಾ ಆಯೋಗಕ್ಕೆ ನಾನಾಗಲೀ, ತೇಜಸ್ವಿ ಯಾದವ್ ಆಗಲೀ, ಬಿಹಾರವಾಗಲೇ ಹೆದರುವುದಿಲ್ಲ ಎಂದಿದ್ದರು.
ರಾಹುಲ್ ಆರೋಪಗಳು
ಆಗಸ್ಟ್ 7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಮತದಾರರ ಪಟ್ಟಿಯಲ್ಲಿ ನಕಲಿ ನಮೂದುಗಳು, ‘ಶೂನ್ಯ’ ಮನೆ ಸಂಖ್ಯೆಯೊಂದಿಗೆ ಪಟ್ಟಿ ಮಾಡಲಾದ ಮತದಾರರು ಮತ್ತು ಒಂದೇ ವಿಳಾಸದಲ್ಲಿ ಡಜನ್‌ಗಟ್ಟಲೆ ಮತದಾರರನ್ನು ನೋಂದಾಯಿಸಿರುವಂತಹ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು.
ಈ ಆರೋಪಗಳನ್ನು ತಳ್ಳಿಹಾಕಿದ ಜ್ಞಾನೇಶ್ ಕುಮಾರ್, ಇವು ತಪ್ಪು ನಿರೂಪಣೆಗಳಾಗಿವೆ ಎಂದು ಹೇಳಿದರು. ಉದಾಹರಣೆಗೆ, ಕರ್ನಾಟಕದ ಬೆಂಗಳೂರು ಕೇಂದ್ರ ಕ್ಷೇತ್ರದ ಮಹದೇವಪುರ ವಿಧಾನಸಭಾ ಭಾಗದಲ್ಲಿ 2023ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆದ್ದಿತ್ತು ಎಂಬುದನ್ನು ಅವರು ಉಲ್ಲೇಖಿಸಿದರು.
ನಕಲಿ ಮತದಾನದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ಒಬ್ಬ ಮತದಾರನ ಹೆಸರು ಒಂದಕ್ಕಿಂತ ಹೆಚ್ಚು ಬೂತ್‌ಗಳಲ್ಲಿರುವುದು ಬೇರೆ, ಆದರೆ ಎರಡು ಕಡೆ ಮತ ಚಲಾಯಿಸುವುದು ಬೇರೆ. ಎರಡು ಬಾರಿ ಮತ ಚಲಾಯಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಒಬ್ಬ ಮತದಾರ ಮತಗಟ್ಟೆಗೆ ಹೋದಾಗ, ಆತ ಒಂದೇ ಬಾರಿ ಬಟನ್ ಒತ್ತಲು ಸಾಧ್ಯ. ಹಾಗಾಗಿ ಮತ ಕಳ್ಳತನ ಸಾಧ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದರು.
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ
ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಆತುರವಾಗಿ ನಡೆಸಲಾಗುತ್ತಿದೆ ಎಂಬ ವಿಪಕ್ಷಗಳ (ಕಾಂಗ್ರೆಸ್ ಮತ್ತು ಆರ್ಜೆಡಿ) ಆರೋಪಕ್ಕೂ ಸಿಇಸಿ ಉತ್ತರಿಸಿದ್ದಾರೆ. “ಪ್ರತಿ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳನ್ನು ಸರಿಪಡಿಸುವುದು ಪ್ರಜಾಪ್ರತಿನಿಧಿ ಕಾಯ್ದೆಯಡಿ ಕಡ್ಡಾಯ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಸತ್ಯವನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಧೈರ್ಯ ಬೇಕು,” ಎಂದು ರಾಹುಲ್ ಗಾಂಧಿಯವರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಆಯೋಗ ಬದ್ಧವಾಗಿದೆ ಹಾಗೆಯೇ ಮತದಾರರ ಪರ ಆಯೋಗವು ಬಂಡೆಯಂತೆ ನಿಲ್ಲಲಿದೆ ಎಂದು ಪುನರುಚ್ಚರಿಸಿದ್ದಾರೆ.