ನವದೆಹಲಿ: ಭಾರತ -ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕವೂ ಭಾರತದ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶೆಲ್, ಡ್ರೋನ್ ದಾಳಿ ನಡೆಸುವ ಮೂಲಕ ನೀಚ ಬುದ್ಧಿ ತೋರಿದ ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆಯು ಹೊಸ ವಾರ್ನಿಂಗ್ ಕೊಟ್ಟಿದೆ. ಆಪರೇಷನ್ ಸಿಂದೂರ ಇಲ್ಲಿಗೆ ಮುಗಿದಿಲ್ಲ. ಅದು ಮುಂದುವರಿದಿದೆ ಎಂದು ಹೇಳುವ ಮೂಲಕ ನಾವೇನೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಿದೆ.
ಭಾನುವಾರ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ, ‘ಆಪರೇಷನ್ ಸಿಂದೂರದಲ್ಲಿ ನಮಗೆ ನೀಡಿದ್ದ ಎಲ್ಲ ಕಾರ್ಯಗಳನ್ನೂ ನಿಖರವಾಗಿ ಹಾಗೂ ವೃತ್ತಿಪರತೆಯಿಂದಾಗಿ ಪೂರ್ಣಗೊಳಿಸಿದ್ದೇವೆ. ವಿವೇಚನೆಯಿಂದ ಹಾಗೂ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ನಮ್ಮ ಉದ್ದೇಶಗಳನ್ನು ಈಡೇರಿಸಲಾಗಿದೆ. ಕಾರ್ಯಾಚರಣೆಯು ಇನ್ನೂ ಮುಂದುವರಿದಿದೆ. ಈ ನಿಟ್ಟಿನಲ್ಲಿ ನಾವು ಸೂಕ್ತ ಸಮಯದಲ್ಲಿ ಸುದ್ದಿಗೋಷ್ಟಿ ನಡೆಸಿ ಅದರ ಮೂಲಕ ನಮ್ಮ ಮುಂದಿನ ಕಾರ್ಯಾಚರಣೆಯ ಮಾಹಿತಿಯನ್ನು ನೀಡುತ್ತೇವೆ’ ಎಂದು ಬರೆದುಕೊಂಡಿದೆ.
ಇದೇ ಸಂದರ್ಭದಲ್ಲಿ ದೇಶವಾಸಿಗಳು ಯಾವುದೇ ಸುಳ್ಳು ಸುದ್ದಿಗಳನ್ನು ನಂಬದಂತೆಯೂ, ಪರಿಶೀಲನೆ ಮಾಡದೇ, ಖಾತ್ರಿಪಡಿಸಿಕೊಳ್ಳದೇ ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆಯೂ ಸಲಹೆ ನೀಡಿದೆ, ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದೂ ವಾಯುಪಡೆಯು ಮನವಿ ಮಾಡಿದೆ.
ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿ ಇನ್ನೇನು ಜನರು ನಿರಾಳರಾದರು ಎಂದು ಭಾವಿಸುವಷ್ಟರಲ್ಲಿ ಪಾಕ್ ನಾಯಿ ಬಾಲ ಡೊಂಕು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಜಮ್ಮು ಕಾಶ್ಮೀರದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿತ್ತು. ಶ್ರೀನಗರದ ಕೆಲವು ಕಡೆ ಸ್ಫೋಟದ ಸದ್ದೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಾಯುಪಡೆಯ ಈ ಹೇಳಿಕೆ ಮಹತ್ವ ಪಡೆದಿದೆ.