ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹದ ನಡುವೆಯೇ, ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. “ನಮ್ಮ ಬಳಿ ಮುಖ್ಯಮಂತ್ರಿ ಕುರ್ಚಿಗಾಗಿ ನೀಡಲು 500 ಕೋಟಿ ರೂಪಾಯಿಗಳಿಲ್ಲ. ಆದರೆ ಪಂಜಾಬ್ ಅನ್ನು ‘ಚಿನ್ನದ ರಾಜ್ಯ’ವನ್ನಾಗಿ ಮಾಡುವ ಶಕ್ತಿ ನಮ್ಮಲ್ಲಿದೆ,” ಎಂದು ಅವರು ಹೇಳಿದ್ದಾರೆ.
ಸಕ್ರಿಯ ರಾಜಕಾರಣಕ್ಕೆ ಮರಳಲು ಷರತ್ತು
ತಮ್ಮ ಪತಿ ನವಜೋತ್ ಸಿಂಗ್ ಸಿಧು ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಬೇಕಾದರೆ, ಕಾಂಗ್ರೆಸ್ ಪಕ್ಷವು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಕೌರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಯಾವಾಗಲೂ ಪಂಜಾಬ್ ಮತ್ತು ಪಂಜಾಬಿಯತ್ ಪರವಾಗಿ ಮಾತನಾಡುತ್ತೇವೆ. ಯಾರು 500 ಕೋಟಿ ರೂ. ಸೂಟ್‍ಕೇಸ್ ನೀಡುತ್ತಾರೋ ಅವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ ನಮ್ಮ ಬಳಿ ಅಷ್ಟು ಹಣವಿಲ್ಲ,” ಎಂದು ಪರೋಕ್ಷವಾಗಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್‌ನಲ್ಲಿ ಒಳಜಗಳ
ಪಂಜಾಬ್ ಕಾಂಗ್ರೆಸ್‌ನಲ್ಲಿನ ನಾಯಕರ ಜಗಳದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದರು. “ಪಕ್ಷದಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇವರು ಸಿಧು ಅವರನ್ನು ಮುನ್ನಲೆಗೆ ಬರಲು ಬಿಡುವುದಿಲ್ಲ. ಇವರ ಒಳಜಗಳದಿಂದಾಗಿ ಪಕ್ಷವನ್ನು ಸೋಲಿಸಲು ಇವರೇ ಪಣತೊಟ್ಟಂತಿದೆ,” ಎಂದು ಆರೋಪಿಸಿದರು. ಹೈಕಮಾಂಡ್ ಈ ವಿಷಯವನ್ನು ಅರ್ಥಮಾಡಿಕೊಂಡರೆ ಮಾತ್ರ ಬದಲಾವಣೆ ಸಾಧ್ಯ ಎಂದರು.
ಬಿಜೆಪಿ ಸೇರ್ತಾರಾ ಸಿಧು?
ಬಿಜೆಪಿ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನೀಡಿದರೆ ಪಕ್ಷ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪತಿಯ ಪರವಾಗಿ ನಾನು ಉತ್ತರಿಸಲಾಗದು,” ಎಂದರು. ಸಿಧು ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಕ್ರಿಕೆಟ್ ಕಾಮೆಂಟರಿಯಲ್ಲಿ ಬ್ಯುಸಿ
ಕಳೆದ ಹಲವು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವಿರುವ ನವಜೋತ್ ಸಿಂಗ್ ಸಿಧು, 2024ರ ಲೋಕಸಭಾ ಚುನಾವಣೆಯ ಪ್ರಚಾರದಲ್ಲೂ ಪಾಲ್ಗೊಂಡಿರಲಿಲ್ಲ. ಪ್ರಸ್ತುತ ಅವರು ಐಪಿಎಲ್ ಕ್ರಿಕೆಟ್ ಕಾಮೆಂಟರಿ ಮತ್ತು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜೀವನದಲ್ಲಿ ಖುಷಿಯಾಗಿದ್ದಾರೆ ಮತ್ತು ಉತ್ತಮ ಹಣ ಗಳಿಸುತ್ತಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ.
ಇದನ್ನೂ ಓದಿ: ಗೋವಾ ಅಗ್ನಿ ದುರಂತ | ನೈಟ್‌ಕ್ಲಬ್ ಮ್ಯಾನೇಜರ್ ಅರೆಸ್ಟ್!



















