ಕರಾವಳಿ/ಬೆಂಗಳೂರು : ಕರಾವಳಿ ಕರ್ನಾಟಕದ ಹೆಮ್ಮೆಯ ಕೆಸರುಗೆದ್ದೆಯ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರ ಅಧೀಕೃತ ಮಾನ್ಯತೆ ನೀಡಿದೆ. ಹಲವು ವರ್ಷಗಳ ಬೇಡಿಕೆ,ನಿರಂತರ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚಿಸಿ ನಮ್ಮ ಸುಂದರ ಜಾನಪದ ಕ್ರೀಡೆಗೆ ಅಧಿಕೃತ ಸ್ಥಾನಮಾನ ನೀಡಿದೆ.
ಈ ಮಾನ್ಯತೆಯು ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್ ಅವರು ಈ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕಂಬಳ ಅಸೋಸಿಯೆಷನ್ ಗೆ ಮಾನ್ಯತೆ ನೀಡುವಂತೆ ಸಂಸ್ಥೆಯ ಅಧ್ಯಕ್ಷರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಇದರ ಜೊತೆ ಈ ಅಸೋಸಿಯೆಷನ್ ಗೆ ಮಾನ್ಯತೆ ನೀಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದರು. ನಂತರ 2025 ಮೇ 5ರಂದು ನೆಡೆದ ಸಭೆಯಲ್ಲಿ ರಾಜ್ಯದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅಧಿಕೃತ ಮಾನ್ಯತೆ ನೀಡುವ ನಿರ್ಧಾರ ಕೈಗೊಳ್ಳಲ್ಲಾಗಿತ್ತು.ಇದೀಗ ಆದೇಶವನ್ನು ಹೊರಡಿಸಲಾಗಿದ್ದು, ಮೊದಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.

(ಬೆಳಪು ದೇವಿಪ್ರಸಾದ್ ಶೆಟ್ಟಿ)
“ಕಂಬಳ ಏನಿದರ ಇತಿಹಾಸ? ಹೇಗೆ ಕಂಬಳವನ್ನು ನಡೆಸಲಾಗುತ್ತದೆ?
ಕೋಣಗಳನ್ನು ಕೆಸರುಗೆದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಇದೊಂದು ಜಾನಪದ ಗ್ರಾಮೀಣ ಕ್ರೀಡೆಯಾಗಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ.ಸಾಮಾನ್ಯವಾಗಿ ಭತ್ತದ ಕಟಾವಿನ ನಂತರ ಕರಾವಳಿ ಜನರು ಈ ಕ್ರೀಡೆಯನ್ನು ಗದ್ದೆಯಲ್ಲಿಏರ್ಪಡಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಕಂಬಳಕ್ಕಾಗಿಯೇ ಮೈದಾನಗಳನ್ನು ಮೀಸಲಿರಿಸಲಾಗುತ್ತಿದೆ.
ಹಿಂದೆ ರಾಜರ ಕಾಲದಲ್ಲಿ ಉಳುಮೆಗಾಗಿ ಬಳಸುತ್ತಿದ್ದ ಕೋಣಗಳಲ್ಲಿ, ದಷ್ಟಪುಷ್ಟವಾದ ಕೋಣಗಳನ್ನು ಆಯ್ಕೆ ಮಾಡಿ ಅವುಗಳ ನಡುವೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡುತ್ತಿದ್ದರು.ಇದನ್ನು ರೈತರ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವ ಸಲುವಾಗಿ ಅಂದು ಅಯೋಜಿಸುತ್ತಿದ್ದರು.ಹಾಗೇ ಇಲ್ಲಿ ದಷ್ಟಪುಷ್ಟ ಕೋಣಗಳನ್ನು ಅಯ್ಕೆ ಮಾಡ್ತಾ ಇರೋದ್ರಿಂದ ರೈತರು ತಮ್ಮ ಕೋಣಗಳನ್ನು ಚೆನ್ನಾಗಿ ಆರೈಕೆ ಮಾಡಲಿ ಎನ್ನುವಂತದ್ದು ಕೂಡ ಸ್ಪರ್ಧೆಯ ಹಿಂದಿನ ಉದ್ದೇಶವಾಗಿತ್ತು.
“ಕಂಬಳದಲ್ಲಿ ಎಷ್ಟು ಬಗೆಗಳಿವೆ? ಕೋಣಗಳಿಗೆ ಹಿಂಸೆ ಕೊಡುತ್ತಾರೆ ಎನ್ನುವ ಆರೋಪ!”
ಕೋಣಗಳನ್ನು ಹಿಡಿದು ಕೆಸರುಗದ್ದೆಯಲ್ಲಿ ಅವುಗಳಿಗೆ ಸರಿಸಾಟಿಯಾಗಿ ಓಡುವಂತದ್ದು ಅಷ್ಟು ಸುಲಭದ ಮಾತಲ್ಲ, ಇದರ ಹಿಂದೆ ಹಲವು ವರ್ಷಗಳ ಪ್ರಯತ್ನವಿರುತ್ತದೆ.ಕಂಬಳದ ಭಾಷೆಯಲ್ಲಿ ಕೋಣಗಳಿಗೆ ತರಬೇತಿ ಕೊಟ್ಟು, ಸ್ಪರ್ಧೆಯ ದಿನ ಆ ಗಲಾಟೆ ಗೌಜುಗಳ ನಡುವೆ ನಿಖರ ಗುರಿ ತಲುಪುವಂತೆ ಮಾಲೀಕರು ತಯಾರಿ ಮಾಡುತ್ತಾರೆ.
ಕಂಬಳವನ್ನುಒಂಟಿ ಗದ್ದೆಯಲ್ಲಿ ಹಾಗೂ ಜೋಡಿ ಗೆದ್ದೆಯಲ್ಲಿ ಏರ್ಪಡಿಸಲಾಗುತ್ತದೆ. ಜೊಡುಕೆರೆ ಕಂಬಳದಲ್ಲಿ ಸಾಮಾನ್ಯವಾಗಿ ಪುರಾಣ, ಜನಪದದ ಅವಳಿ ಹೆಸರುಗಳನ್ನು ಓಟದ ಗದ್ದೆಗಳಿಗೆ ಇಡಲಾಗುತ್ತದೆ.
ವಿಧಗಳನ್ನು ಗಮನಿಸಿದರೆ, ಹಗ್ಗದ ಓಟ, ನೇಗಿಲು ಓಟ,ಅಡ್ಡ ಹಲಗೆ ಓಟ ಮತ್ತು ಕೆನೆ ಹಲಗೆ ಓಟಗಳಿವೆ. ಇಲ್ಲಿ ಮೊದಲ ಮೂರು ಸಮಯದ ಮೇಲಿನ ಸ್ಪರ್ಧೆಯಾದರೆ, ಕೆನೆ ಹಲಗೆ ಓಟ ನೀರು ಎಷ್ಟು ಎತ್ತರಕ್ಕೆ ಚಿಮ್ಮುತ್ತದೆ ಎನ್ನುವುದರ ಮೇಲೆ ವಿಜೇತರನ್ನ ಆಯ್ಕೆಮಾಡಲಾಗುತ್ತದೆ.
ಇನ್ನು ಬಹುದೊಡ್ಡ ಆರೋಪ ಕೋಣಗಳಿಗೆ ಹಿಂಸೆ ನೀಡುತ್ತಿದ್ದಾರೆ ಎನ್ನುವಂತದ್ದು. ಕೋಣಗಳಿಗೆ ನಾಗರಬೆತ್ತದಿಂದ ಹೊಡೆಯುವಂತದ್ದು ಸಾಮಾನ್ಯ.ಇದನ್ನು ಪ್ರಾಣಿಹಿಂಸೆ ಎಂದು ಕೆಲವರು ಧೂಷಿಸುತ್ತಾರೆ.ಆದರೆ ಸ್ಪರ್ಧೆಯ ಹೊರತಾಗಿ ಮಾಲೀಕರು ತಮ್ಮ ಕೋಣಗಳನ್ನು ಸ್ವಂತ ಮಕ್ಕಳಂತೆ ಆರೈಕೆ ಮಾಡ್ತಾರೆ.ಕಂಬಳದ ಕೋಣಗಳನ್ನು ಸಾಕುವಂತದ್ದು ಅಷ್ಟು ಸುಲಭದ ಮಾತಲ್ಲ.ಉತ್ತಮ ಜಾತಿಯ ಕೋಣಗಳನ್ನು ಆಯ್ಕೆ ಮಾಡಿ ಅವುಗಳಿಗೆ ತರಬೇತಿ ನೀಡಬೇಕು.ಪ್ರತಿದಿನ ಚೆನ್ನಾಗಿರುವ ಹುಲ್ಲು,ಬೇಯಿಸಿದ ಹುರುಳಿಯನ್ನು ಹಾಕಲಾಗುತ್ತದೆ.ಎಣ್ಣೆಯನ್ನು ಹಚ್ಚಿ ಆರೈಕೆ ಮಾಡಲಾಗುತ್ತದೆ.
“ಅಧಿಕೃತ ಸ್ಥಾನಮಾನ,ಇನ್ಮುಂದೆ ಸಿಗುತ್ತೆ ಅನುದಾನ!”
ಮುಂದಿನ ಬಜೆಟ್ ನಿಂದ ಕಂಬಳಕ್ಕೆ ಅನುದಾನವನ್ನು ನೀಡಲಾಗುತ್ತದೆ.ಈ ಅನುದಾನವೂ ಕಂಬಳ ಆಯೋಜಿಸುವ ಸಂಸ್ಥೆಗೆ ನೇರವಾಗಿ ಬಿಡುಗಡೆಯಾಗಲಿದೆ.ಇದರ ಜೊತೆಗೆ ಇನ್ನುಮುಂದೆ ಸರ್ಕಾರ ಕೆಲವು ಮಾನದಂಡಗಳನ್ನು ,ಶಿಸ್ತು ನಿಯಮಗಳನ್ನು ಕಂಬಳಕ್ಕೆ ಹೇರುವ ಅವಕಾಶವಿದೆ.
ನಮ್ಮ ಮೂಲ ,ನಮ್ಮ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವಂತದ್ದು ನಮ್ಮೆಲ್ಲರ ಕರ್ತವ್ಯ.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ.