ಬೆಂಗಳೂರು: ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಾಗರಭಾವಿಯ ಖಾಸಗಿ ಆಸ್ಪತ್ರೆಯಲ್ಲಿನಡೆದಿದೆ.
ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವುದನ್ನ ನರ್ಸ್ ಒಬ್ಬರು ಗಮನಿಸಿದ್ದರು. ಬಳಿಕ ಈ ಕುರಿತು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ಅದರಂತೆ ಆಸ್ಪತ್ರೆಯ ಹಿರಿಯ ವೈದ್ಯ ಚೇತನ್ ಆರೋಪಿಯ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್‌ನ್ನು ಸೀಜ್ ಮಾಡಿದ್ದಾರೆ.
ಆರೋಪಿ ವಿಡಿಯೋ ಮಾಡಿಕೊಂಡಿರುವುದನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ. ಹೀಗಾಗಿ ಈ ನರ್ಸ್ನದ್ದು ಮಾತ್ರ ವಿಡಿಯೋ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಆಪರೇಷನ್ ಥೇಟರ್‌ನಲ್ಲಿ ಕೆಲಸ ಮಾಡುವ ನರ್ಸ್ಗಳೆಲ್ಲರ ವಿಡಿಯೋ ಮಾಡಿಕೊಂಡಿದ್ದಾನಾ? ಹಾಗೂ ಮಾಡಿಕೊಂಡಿರುವ ವಿಡಿಯೋ ಬೇರೆಯವರಿಗೆ ಕಳುಹಿಸಿದ್ದಾನಾ? ಎನ್ನುವುದನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ ಬಸ್ ದುರಂತ | ಆಸ್ಪತ್ರೆ ದಾಖಲಾಗಿದ್ದ ಬಸ್ ಡ್ರೈವರ್ ಮೃತ



















