ಸತ್ನಾ (ಮಧ್ಯಪ್ರದೇಶ): ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ, “ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಧಮ್ಕಿ ಹಾಕಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ರಾಂಪುರ ಬಘೇಲನ್ ನಗರ ಪರಿಷತ್ತಿನ ಬಿಜೆಪಿ ಕೌನ್ಸಿಲರ್ ಪತಿ ಅಶೋಕ್ ಸಿಂಗ್ ಎಂದು ಗುರುತಿಸಲಾಗಿದೆ. ಅಧಿಕಾರದ ಮದ ಮತ್ತು ಕಾನೂನಿನ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಆರೋಪಿ ಅಶೋಕ್ ಸಿಂಗ್ ಆಡಿರುವ ಮಾತು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.
ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅಶೋಕ್ ಸಿಂಗ್ ಸುಮಾರು ಆರು ತಿಂಗಳ ಹಿಂದೆ ಮಹಿಳೆಯ ಮನೆಗೆ ನುಗ್ಗಿ, ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದ. ಅಷ್ಟಕ್ಕೇ ನಿಲ್ಲದೆ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಆತ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಸಂತ್ರಸ್ತೆ ತನ್ನ ಕುಟುಂಬದವರ ಪ್ರಾಣಕ್ಕೆ ಹೆದರಿ ಇಷ್ಟು ದಿನ ಸುಮ್ಮನಿದ್ದರೂ, ಆರೋಪಿಯ ಕಿರುಕುಳ ಮಿತಿಮೀರಿತ್ತು. ಡಿ.20 ರಂದು ಮತ್ತೆ ಆಕೆಯ ಅಂಗಡಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ವಿಡಿಯೋ ವೈರಲ್
ಸಂತ್ರಸ್ತ ಮಹಿಳೆ ಧೈರ್ಯ ಮಾಡಿ ಈತನ ಉದ್ಧಟತನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಆ ವಿಡಿಯೋದಲ್ಲಿ ಮಹಿಳೆ ಕಣ್ಣೀರಿಡುತ್ತಾ “ನಿನ್ನ ವಿರುದ್ಧ ದೂರು ನೀಡುತ್ತೇನೆ” ಎಂದಾಗ, ಅಶೋಕ್ ಸಿಂಗ್ ಕಿಂಚಿತ್ತೂ ಅಂಜದೆ, “ನನ್ನನ್ನ ಏನು ಮಾಡ್ತೀಯಾ? ನನ್ನನ್ನು ಯಾರೂ ಏನೂ ಮಾಡಲಾಗಲ್ಲ. ನಿನಗೆ ಎಲ್ಲಿ ಬೇಕೋ ಅಲ್ಲಿ ದೂರು ಕೊಡು” ಎಂದು ಅಹಂಕಾರದಿಂದ ಹೇಳುತ್ತಿರುವುದು ದಾಖಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಮಿನಲ್ ಹಿನ್ನೆಲೆಯ ಆರೋಪ:
ಅಶೋಕ್ ಸಿಂಗ್ ಈ ಹಿಂದೆ ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೆ ಗುರಿಯಾಗಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಐದು ದಿನಗಳ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಇದುವರೆಗೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಒಂದು ವೇಳೆ ತನಗೆ ಅಥವಾ ತನ್ನ ಕುಟುಂಬಕ್ಕೆ ಅಪಾಯವಾದರೆ ಪೊಲೀಸರೇ ಹೊಣೆ ಎಂದೂ ಆಕೆ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸತ್ನಾ ಎಸ್‌ಪಿ ಹಂಸ್‌ರಾಜ್ ಸಿಂಗ್, ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಕೈಗಳಿಗೆ ಬೇಡಿ, ಮುಖಕ್ಕೆ ಕಪ್ಪು ಬಟ್ಟೆ : ಜೈಲಿಂದಲೇ ನಾಮಪತ್ರ ಸಲ್ಲಿಸಿದ ಗ್ಯಾಂಗ್‌ಸ್ಟರ್!



















