ನವದೆಹಲಿ: ಭಾರತವು ಎಲ್ಲಾ ನಿರೀಕ್ಷೆಗಳನ್ನು ಮೀರಿ ಜಿಡಿಪಿಯಲ್ಲಿ ಸಾಧನೆ ಮಾಡಿದೆ ಮತ್ತು ಇನ್ನು ಮುಂದೆ ದೇಶವನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಸೆಮಿಕಾನ್ ಇಂಡಿಯಾ 2025’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿ ಅಂಕಿಅಂಶಗಳನ್ನು ಉಲ್ಲೇಖಿಸಿ, ಈ ಹೇಳಿಕೆ ನೀಡಿದ್ದಾರೆ.
“ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳು ಮತ್ತೊಮ್ಮೆ ಭಾರತವು ಎಲ್ಲಾ ನಿರೀಕ್ಷೆಗಳನ್ನು ಮೀರಿ ಕಾರ್ಯನಿರ್ವಹಿಸಿದೆ ಎಂಬುದನ್ನು ಸಾಬೀತುಪಡಿಸಿವೆ” ಎಂದು ಪ್ರಧಾನಿ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತವು ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಗಮನಾರ್ಹ ಬೆಳವಣಿಗೆಯ ದರವನ್ನು ಸಾಧಿಸಿದೆ. ಒಂದು ಕಡೆ, ವಿಶ್ವದ ಅನೇಕ ಆರ್ಥಿಕತೆಗಳು ಅನಿಶ್ಚಿತತೆ ಮತ್ತು ಆರ್ಥಿಕ ಸ್ವಾರ್ಥಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿವೆ. ಆದರೆ, ಇಂಥ ಪರಿಸ್ಥಿತಿಯಲ್ಲಿಯೂ ಭಾರತವು ಈ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.
ಈ ಬೆಳವಣಿಗೆಯು ಎಲ್ಲಾ ಕ್ಷೇತ್ರಗಳಲ್ಲಿ ಗೋಚರಿಸುತ್ತಿದೆ ಮತ್ತು ಇದು ನಮ್ಮ ನಾಗರಿಕರಲ್ಲಿ ವಿಶಿಷ್ಟ ಉತ್ಸಾಹವನ್ನು ತಂದಿದೆ. ಈ ವೇಗದೊಂದಿಗೆ, ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸೆಮಿಕಂಡಕ್ಟರ್ ಕ್ಷೇತ್ರದ ಬಗ್ಗೆ ಪ್ರಧಾನಿ ಮಾತು
ಸೆಮಿಕಂಡಕ್ಟರ್ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಿ, “ಜಗತ್ತು ಭಾರತವನ್ನು ನಂಬುತ್ತದೆ. ಜಗತ್ತು ಭಾರತದಲ್ಲಿ ವಿಶ್ವಾಸವಿಟ್ಟಿದೆ. ಸೆಮಿಕಂಡಕ್ಟರ್ ಭವಿಷ್ಯವನ್ನು ಭಾರತದೊಂದಿಗೆ ನಿರ್ಮಿಸಲು ಜಗತ್ತು ಸಿದ್ಧವಾಗಿದೆ” ಎಂದು ಹೇಳಿದರು. “ಕಳೆದ ಶತಮಾನವು ತೈಲದಿಂದ ರೂಪುಗೊಂಡಿದ್ದರೆ, 21ನೇ ಶತಮಾನದ ಶಕ್ತಿಯು ಸಣ್ಣ ಚಿಪ್‌ಗೆ ಸೀಮಿತವಾಗಿದೆ. ಈ ಚಿಪ್ ಪ್ರಪಂಚದ ಅಭಿವೃದ್ಧಿಯನ್ನು ವೇಗಗೊಳಿಸುವ ಶಕ್ತಿಯನ್ನು ಹೊಂದಿದೆ” ಎಂದು ಅವರು ಹೇಳಿದರು.
“2021ರಲ್ಲಿ ನಾವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. 2023ರ ವೇಳೆಗೆ ಭಾರತದ ಮೊದಲ ಸೆಮಿಕಂಡಕ್ಟರ್ ಸ್ಥಾವರಕ್ಕೆ ಅನುಮೋದನೆ ನೀಡಲಾಯಿತು. 2024ರಲ್ಲಿ ನಾವು ಮತ್ತಷ್ಟು ಸ್ಥಾವರಗಳಿಗೆ ಅನುಮೋದನೆ ನೀಡಿದ್ದೇವೆ. 2025ರಲ್ಲಿ, ನಾವು ಐದು ಹೆಚ್ಚುವರಿ ಯೋಜನೆಗಳಿಗೆ ಅನುಮತಿ ನೀಡಿದ್ದೇವೆ,” ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.
ಒಟ್ಟಾರೆಯಾಗಿ, 10 ಸೆಮಿಕಂಡಕ್ಟರ್ ಯೋಜನೆಗಳಲ್ಲಿ 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಇದು ಭಾರತದ ಮೇಲೆ ವಿಶ್ವದ ಹೆಚ್ಚುತ್ತಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. “ಭಾರತದ ಅತಿ ಸಣ್ಣ ಚಿಪ್ ಜಗತ್ತಿನಲ್ಲಿ ಅತಿ ದೊಡ್ಡ ಬದಲಾವಣೆಯನ್ನು ತರುವ ದಿನ ದೂರವಿಲ್ಲ. ನಮ್ಮ ಪ್ರಯಾಣ ತಡವಾಗಿ ಪ್ರಾರಂಭವಾಯಿತು, ಆದರೆ ಈಗ ನಮ್ಮನ್ನು ಯಾವುದೂ ತಡೆಯಲು ಸಾಧ್ಯವಿಲ್ಲ,” ಎಂದು ಅವರು