ನವದೆಹಲಿ: ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಲಕ್ಷಾಂತರ ಜನ ಮೃತಪಡುತ್ತಾರೆ. ಎಷ್ಟೋ ಸಲ ಅಪಘಾತ ಸಂಭವಿಸಿದ ಬಳಿಕ ಸಹಾಯ ಮಾಡುವವರ ಕೊರತೆಯಿಂದಲೇ ಸಾವಿರಾರು ಜನ ಸಾವಿಗೀಡಾಗುತ್ತಾರೆ. ಹೀಗೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಉತ್ತೇಜನ ನೀಡಲು ಮುಂದಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದವರಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.
“ಗುಡ್ ಸಮೆರಿಟನ್ ಯೋಜನೆ ಅನ್ವಯ ಸಹಾಯ ಮಾಡುವವರಿಗೆ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ. ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸುವವರ ಸಂಖ್ಯೆ ಜಾಸ್ತಿಯಾಗಲಿ. ಇದರಿಂದ ಹೆಚ್ಚಿನ ಜನರ ಪ್ರಾಣ ಉಳಿಯಲಿ ಎಂದು ಬಹುಮಾನದ ಮೊತ್ತವನ್ನು 5 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಏರಿಸಲಾಗಿದೆ” ಎಂದಿದ್ದಾರೆ.
“ರಸ್ತೆ ಅಪಘಾತ ಸಂಭವಿಸಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸ್ವಲ್ಪವೇ ಸಮಯ ಇರುತ್ತದೆ. ಅಷ್ಟರಲ್ಲಿಯೇ ದಾಖಲಿಸಿದರೆ ಗಾಯಾಳುಗಳು ಬದುಕುಳಿಯುತ್ತಾರೆ. ಇನ್ನು, ಗಾಯಗೊಂಡವರಿಗೆ ಸರ್ಕಾರವು 1.5 ಲಕ್ಷ ರೂ.ವರೆಗೆ ಚಿಕಿತ್ಸೆ ನೀಡುತ್ತದೆ” ಎಂದು ಕೂಡ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಪ್ರತ ವರ್ಷ 4.8 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳಿಂದ ವರ್ಷಕ್ಕೆ 1.8 ಲಕ್ಷ ಜನ ಮೃತಪಡುತ್ತಿದ್ದಾರೆ. ಇವರಲ್ಲಿ 18ರಿಂದ 45 ವರ್ಷ ವಯಸ್ಸಿನವರ ಸಂಖ್ಯೆ ಹೆಚ್ಚಿದೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ 10,000 ಮಂದಿ ಇದ್ದಾರೆ. ಇದು ದೊಡ್ಡ ಸಾರ್ಜನಿಕ ಆರೋಗ್ಯ ಸಮಸ್ಯೆಯೇ ಆಗಿದೆ. ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ ಎಂದು ಎಂದು ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.