ನವದೆಹಲಿ : ವಿಜಯ್ ಹಜಾರೆ ಟ್ರೋಫಿ 2025–26ರಲ್ಲಿ ಬಿಹಾರ ತಂಡವು ಅರುಣಾಚಲ ಪ್ರದೇಶದ ವಿರುದ್ಧ ವಿಶ್ವದಾಖಲೆಯ ಮೊತ್ತವನ್ನು ಪೇರಿಸಿದ ಬೆನ್ನಲ್ಲೇ, ಭಾರತದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಹಾರದ ಬ್ಯಾಟರ್‌ಗಳ ಅಬ್ಬರವನ್ನು ಶ್ಲಾಘಿಸಿದರೂ, ಇಂತಹ ಏಕಪಕ್ಷೀಯ ಪಂದ್ಯಗಳು “ಆದರ್ಶ ಸ್ಪರ್ಧೆ” ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್ ಹೇಳಿದ್ದೇನು?
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, “ವೈಭವ್ ಸೂರ್ಯವಂಶಿ ಅವರ ಆಟಕ್ಕೆ ದೊಡ್ಡ ಚಪ್ಪಾಳೆ ಸಲ್ಲಬೇಕು. ಆದರೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಪ್ಲೇಟ್ ಗ್ರೂಪ್‌ನಲ್ಲಿರುವ ಕೆಲವು ತಂಡಗಳ ಗುಣಮಟ್ಟದಲ್ಲಿ ದೊಡ್ಡ ಅಂತರವಿದೆ (Chalk and cheese difference). ಇದು ಸಂಪೂರ್ಣವಾಗಿ ಏಕಪಕ್ಷೀಯವಾಗಿಬಿಡುತ್ತದೆ ಮತ್ತು ಅಲ್ಲಿ ಯಾವುದೇ ಸ್ಪರ್ಧೆ ಇರುವುದಿಲ್ಲ. ಇದು ಒಂದು ಆದರ್ಶ ಪಂದ್ಯವಲ್ಲ,” ಎಂದು ಹೇಳಿದ್ದಾರೆ.
ದಾಖಲೆಗಳನ್ನು ಕಡೆಗಣಿಸಬಾರದು ಎಂದು ಎಚ್ಚರಿಸಿದ ಅವರು, “ವೈಭವ್‌ಗೆ ಅದರ ಶ್ರೇಯಸ್ಸು ಸಲ್ಲಲೇಬೇಕು. ನಿಮ್ಮ ಮನೆಯ ಅಂಗಳದಲ್ಲಿ ದೊಡ್ಡ ಸ್ಕೋರ್ ಮಾಡಿದರೂ ಅದು ದೊಡ್ಡ ಸ್ಕೋರ್. ದ್ವಿಶತಕ ಎಲ್ಲೇ ಹೊಡೆದರೂ ದ್ವಿಶತಕವೇ. ಆದರೆ, ಅರುಣಾಚಲ ಪ್ರದೇಶದಂತಹ ತಂಡಗಳು ಉತ್ತಮ ತಂಡಗಳಾಗಿ ಬೆಳೆಯಬೇಕೆಂಬ ಕಾಳಜಿ ನಮಗಿದ್ದರೆ, ಇಂತಹ ಸೋಲುಗಳು ಅವರ ಆತ್ಮವಿಶ್ವಾಸದ ಮೇಲೆ ಎಂತಹ ಪರಿಣಾಮ ಬೀರಬಹುದು?” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಅವರ ಈ ಹೇಳಿಕೆಯು ದೇಶೀಯ ಕ್ರಿಕೆಟ್‌ನ ರಚನೆ ಮತ್ತು ದುರ್ಬಲ ತಂಡಗಳ ವಿರುದ್ಧದ ಪಂದ್ಯಗಳ ಮೌಲ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇಶಾನ್ ಕಿಶನ್ ಬಗ್ಗೆ ಮೆಚ್ಚುಗೆ
ಇದೇ ವೇಳೆ ಅಶ್ವಿನ್ ಅವರು ಇಶಾನ್ ಕಿಶನ್ ಅವರ ಪ್ರದರ್ಶನವನ್ನೂ ಕೊಂಡಾಡಿದ್ದಾರೆ. ಜಾರ್ಖಂಡ್ ಪರ ಆಡುತ್ತಿರುವ ಕಿಶನ್, ಕರ್ನಾಟಕದ ವಿರುದ್ಧ 33 ಎಸೆತಗಳಲ್ಲಿ ಶತಕ ಸಿಡಿಸಿ (ಒಟ್ಟು 125 ರನ್) ಅಬ್ಬರಿಸಿದ್ದರು. “ಎಲ್ಲರೂ ಕಠಿಣ ಸಮಯವನ್ನು ಎದುರಿಸುತ್ತಾರೆ. ಇಶಾನ್ ಕಿಶನ್ ತಂಡದಿಂದ ಹೊರಬಿದ್ದರು, ವಿರಾಮ ತೆಗೆದುಕೊಂಡರು. ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮತ್ತು ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಆಟ ನೋಡಿದರೆ, ಆತ್ಮವಿಶ್ವಾಸ ಮತ್ತು ಫಾರ್ಮ್ ಮನುಷ್ಯನನ್ನು ಹೇಗೆ ಬದಲಾಯಿಸಬಲ್ಲದು ಎಂಬುದು ತಿಳಿಯುತ್ತದೆ,” ಎಂದು ಅಶ್ವಿನ್ ಬಣ್ಣಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ ಬಸ್ ದುರಂತ | ಊರಿಗೆ ಹೊರಟಿದ್ದ ಮೂವರು ಯುವತಿಯರು ಪಾರಾಗಿದ್ದೇ ರೋಚಕ!


















