ಭೋಪಾಲ್: ಸೈಬರ್ ವಂಚಕರ “ಡಿಜಿಟಲ್ ಅರೆಸ್ಟ್” ಬೆದರಿಕೆಗೆ ಹೆದರಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 68 ವರ್ಷದ ಹಿರಿಯ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತ ವಕೀಲರನ್ನು ಶಿವಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ. ಇವರು ಜಹಾಂಗೀರಾಬಾದ್‌ನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. “ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಿಮ್ಮ ಹೆಸರಿನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ” ಎಂದು ಸೈಬರ್ ವಂಚಕರು ಬೆದರಿಸಿದ್ದರಿಂದ ಮನನೊಂದು ಅವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, “ನನ್ನ ಹೆಸರಿನಲ್ಲಿ ನಕಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ತೆರೆದು, ಪಹಲ್ಗಾಮ್ ದಾಳಿಯ ಉಗ್ರ ಆಸಿಮ್ ಜೋಜಿಗೆ ಹಣ ನೀಡಲಾಗಿದೆ ಎಂದು ಬೆದರಿಸಲಾಗುತ್ತಿದೆ. ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕಲು ನನಗೆ ಸಾಧ್ಯವಿಲ್ಲ. ಹೀಗಾಗಿ ನನ್ನ ಸ್ವಇಚ್ಛೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ,” ಎಂದು ವರ್ಮಾ ಬರೆದಿದ್ದಾರೆ.
ಅದೇ ಪತ್ರದಲ್ಲಿ, 1984ರ ಭೋಪಾಲ್ ಅನಿಲ ದುರಂತದ ವೇಳೆ ನೂರಾರು ಸಂತ್ರಸ್ತರಿಗೆ ತಾವು ಅಂತ್ಯಸಂಸ್ಕಾರ ನೆರವೇರಿಸಿದ್ದನ್ನು ಮತ್ತು 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಪ್ರಾಣ ಉಳಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ. “ನಾನು ಸಮಾಜಸೇವಕನೇ ಹೊರತು ದೇಶದ್ರೋಹಿಯಲ್ಲ” ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಸೋಮವಾರ ರಾತ್ರಿ ವರ್ಮಾ ಅವರ ಪತ್ನಿ ಮತ್ತು ಮಗಳು ದೆಹಲಿಯಲ್ಲಿದ್ದರು, ಮಗ ಪುಣೆಯಲ್ಲಿದ್ದರು. ಪತ್ನಿ ಫೋನ್ ಮಾಡಿದಾಗ ವರ್ಮಾ ಉತ್ತರಿಸದಿದ್ದಾಗ, ಆತಂಕಗೊಂಡ ಪತ್ನಿ ಮನೆಯಲ್ಲಿದ್ದ ಬಾಡಿಗೆದಾರರಿಗೆ ನೋಡಲು ತಿಳಿಸಿದ್ದಾರೆ. ಕಿಟಕಿ ಮೂಲಕ ನೋಡಿದಾಗ ವರ್ಮಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಇದು ಸೈಬರ್ ವಂಚಕರ ಕೃತ್ಯವಾಗಿದ್ದು, “ಡಿಜಿಟಲ್ ಅರೆಸ್ಟ್” (Digital Arrest) ಹೆಸರಿನಲ್ಲಿ ವಕೀಲರನ್ನು ಬೆದರಿಸಿ, ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವರ್ಮಾ ಅವರ ಮೊಬೈಲ್ ಮತ್ತು ಡೆತ್ ನೋಟ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕರೆ ಮಾಡಿದ ವಂಚಕರ ಪತ್ತೆಗೆ ಬಲೆ ಬೀಸಲಾಗಿದೆ.
ಭೋಪಾಲ್‌ನಲ್ಲಿ ಕಳೆದ ಮೂರು ವಾರಗಳಲ್ಲಿ ವಕೀಲರನ್ನು ಗುರಿಯಾಗಿಸಿಕೊಂಡು ನಡೆದ ಎರಡನೇ ಸೈಬರ್ ಬೆದರಿಕೆ ಪ್ರಕರಣ ಇದಾಗಿದೆ. ನವೆಂಬರ್ 3 ರಂದು ಇದೇ ರೀತಿ ಪುಲ್ವಾಮಾ ದಾಳಿಗೆ ಹಣಕಾಸು ನೆರವು ನೀಡಿದ ಆರೋಪ ಹೊರಿಸಿ ಮತ್ತೊಬ್ಬ ವಕೀಲರಿಗೆ ವಂಚಿಸಲು ಯತ್ನಿಸಲಾಗಿತ್ತು.
ಇದನ್ನೂ ಓದಿ : ಕೃಷ್ಣನೂರು ಉಡುಪಿಗೆ ಇಂದು ಪ್ರಧಾನಿ ಮೋದಿ | ಕನ್ನಡದಲ್ಲೇ ಸಂತಸ ಹಂಚಿಕೊಂಡ ‘ನಮೋ’



















