ಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಅವರು ಮಂಗಳವಾರ ತಮ್ಮ ಚೀನಾ ಪ್ರವಾಸ ಆರಂಭಿಸಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಖಾಸಗಿ, ಗುಂಡು ನಿರೋಧಕ ರೈಲಿನ ಮೂಲಕ ಚೀನಾ ಪ್ರವೇಶಿಸಿದ್ದಾರೆ. ಕಿಮ್ ಅವರು ಪ್ರಯಾಣಿಸಿದ ಐಷಾರಾಮಿ, ಬುಲೆಟ್ ಪ್ರೂಫ್ ರೈಲು ಉತ್ತರ ಕೊರಿಯಾದ ನಾಯಕರಿಗೆ ಸಾಂಪ್ರದಾಯಿಕ ಸಾರಿಗೆ ಮಾಧ್ಯಮವಾಗಿದೆ. ಕಿಮ್ ಅವರ ತಂದೆ ಮತ್ತು ಅಜ್ಜ ಕೂಡ ಇದೇ ರೀತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಬೀಜಿಂಗ್‌ನಲ್ಲಿ ನಡೆಯಲಿರುವ ಮಿಲಿಟರಿ ಪೆರೇಡ್‌ನಲ್ಲಿ ಭಾಗವಹಿಸಲು ಅವರು ಈ ಅಪರೂಪದ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಭೇಟಿಯು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸೋಮವಾರ ರಾತ್ರಿ ಪ್ಯೋಂಗ್ಯಾಂಗ್‌ನಿಂದ ಹೊರಟ ಕಿಮ್ ಜಾಂಗ್ ಉನ್ ಅವರೊಂದಿಗೆ ವಿದೇಶಾಂಗ ಸಚಿವೆ ಚೋ ಸನ್-ಹುಯಿ ಮತ್ತು ಇತರ ಹಿರಿಯ ಅಧಿಕಾರಿಗಳೂ ಚೀನಾಗೆ ಭೇಟಿ ನೀಡುತ್ತಿದ್ದಾರೆ ಎಂದು ಉತ್ತರ ಕೊರಿಯಾದ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಮೊದಲ ಭೇಟಿ: 2023ರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದ ನಂತರ ಇದು ಕಿಮ್ ಅವರ ಮೊದಲ ವಿದೇಶ ಪ್ರವಾಸವಾಗಿದೆ. ಅಲ್ಲದೆ, ಜನವರಿ 2019ರ ನಂತರ ಚೀನಾಕ್ಕೆ ಅವರು ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಪರೇಡ್‌ನಲ್ಲಿ ಭಾಗಿ: ಎರಡನೇ ಮಹಾಯುದ್ಧದ ಅಂತ್ಯದ 80ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಬೀಜಿಂಗ್‌ನಲ್ಲಿ ನಡೆಯಲಿರುವ ಸೇನಾ ಪರೇಡ್ ಅನ್ನು ಕಿಮ್ ಅವರು ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ವೀಕ್ಷಿಸಲಿದ್ದಾರೆ.
ಬಲಗೊಳ್ಳುತ್ತಿರುವ ಮೈತ್ರಿ: ಈ ಮೂವರು ನಾಯಕರ ಒಗ್ಗೂಡುವಿಕೆಯು ಅಮೆರಿಕ ನೇತೃತ್ವದ ಅಂತರರಾಷ್ಟ್ರೀಯ ನಿಯಮಗಳಿಗೆ ಸವಾಲು ಹಾಕುವ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಈ ಭೇಟಿಯು ಉತ್ತರ ಕೊರಿಯಾದ ರಾಜತಾಂತ್ರಿಕ ವರ್ಚಸ್ಸನ್ನು ಹೆಚ್ಚಿಸಲಿದೆ.
ಬಹಳ ವರ್ಷಗಳಿಂದ ಚೀನಾವು ಉತ್ತರ ಕೊರಿಯಾದ ಪ್ರಮುಖ ಬೆಂಬಲಿಗನಾಗಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಬಂಧಗಳನ್ನು ಹೇರಿದರೂ, ಚೀನಾದ ಆರ್ಥಿಕ ನೆರವಿನಿಂದ ಉತ್ತರ ಕೊರಿಯಾ ಉಳಿದುಕೊಂಡಿದೆ. ಇತ್ತೀಚೆಗೆ, ಕಿಮ್ ರಷ್ಯಾದೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದ್ದಾರೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಮಾಸ್ಕೋಗೆ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ಪಯೋಂಗ್ಯಾಂಗ್ ಪೂರೈಸಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಸಕ್ಕೆ ಹೊರಡುವ ಮುನ್ನ, ಕಿಮ್ ಅವರು ತಮ್ಮ ದೇಶದಲ್ಲಿ ಹೊಸ ಕ್ಷಿಪಣಿ ಕಾರ್ಖಾನೆಯನ್ನು ಪರಿಶೀಲಿಸಿ, ಹೊಸ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಅನಾವರಣಗೊಳಿಸಿದ್ದರು. ಇದು ತಮ್ಮ ದೇಶದ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ನಡೆಯಾಗಿದೆ.