ಬೆಂಗಳೂರು: ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳು ಟೋಲ್ ಪ್ಲಾಜಾಗಳ ಮೂಲಕ ಸಂಚರಿಸಿದರೆ ಸಾಕು ಸ್ವಯಂಚಾಲಿತವಾಗಿ ಟೋಲ್ ಕಡಿತವಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಆದರೆ, ಇದರ ಬೆನ್ನಲ್ಲೇ ಸರ್ಕಾರವು ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ ನೀಡಿದೆ.
ಹೌದು, ಟೋಲ್ ಪ್ಲಾಜಾಗಳಲ್ಲಿ ಇದುವರೆಗೆ ಫಾಸ್ಟ್ ಟ್ಯಾಗ್ ಇರದಿದ್ದರೆ ಟೋಲ್ ಶುಲ್ಕದ ಎರಡು ಪಟ್ಟು ಶುಲ್ಕವನ್ನು ಪಾವತಿಸಬೇಕಿತ್ತು. ಕ್ಯಾಶ್ ನೀಡಿದರೆ ಹೀಗೆ ಎರಡು ಪಟ್ಟು ಶುಲ್ಕ ಪಾವತಿಸಬೇಕಿತ್ತು. ಆದರೀಗ, ಕೇಂದ್ರ ಸರ್ಕಾರವು ವಾಹನಗಳ ಮಾಲೀಕರು ಅಥವಾ ಚಾಲಕರು ಯುಪಿಐ ಮೂಲಕ ಹಣ ಪಾವತಿಸಿದರೆ 1.25 ಪಟ್ಟು ಮಾತ್ರ ಶುಲ್ಕ ಪಾವತಿಸಬಹುದಾಗಿದೆ. ಯುಪಿಐಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಉದಾಹರಣೆಗೆ, ನೀವು ಸಂಚರಿಸುವ ಮಾರ್ಗದಲ್ಲಿ ಟೋಲ್ ಮೊತ್ತವು 100 ರೂಪಾಯಿ ಇದೆ ಎಂದಿಟ್ಟುಕೊಳ್ಳಿ. ಆದರೆ, ನಿಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಇರದಿದ್ದರೆ, ಕ್ಯಾಶ್ ಮೂಲಕ ಪಾವತಿ ಮಾಡಿದರೆ ನೀವು ದುಪ್ಪಟ್ಟು ಅಂಧರೆ, 200 ರೂಪಾಯಿ ಪಾವತಿಸಬೇಕು. ಆದರೆ, ನೀವಿನ್ನು ಯುಪಿಐ ಮೂಲಕ ಹಣ ಪಾವತಿಸಿದರೆ, 125 ರೂಪಾಯಿ ಮಾತ್ರ ಪಾವತಿಸಬಹುದು. ಇದರಿಂದ ನಿಮಗೆ 75 ರೂಪಾಯಿ ಉಳಿತಾಯವಾಗುತ್ತದೆ.
ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳಲು ಹಾಗೂ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಹೊಸ ನಿಯಮವನ್ನು ಜಾರಿಗೆ ತರಲಿದೆ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಕೂಡ ಚಿಂತನೆ ನಡೆಸಿದೆ. ಆದರೆ, ಯಾವಾಗ ಜಾರಿಗೆ ಬರಲಿದೆ ಎಂಬುದರ ಕುರಿತು ನಿಖರ ಮಾಹಿತಿ ಒದಗಿಸಿಲ್ಲ.



















