ಕೊಲಂಬೊ : ಐಸಿಸಿ ಮಹಿಳಾ ವಿಶ್ವಕಪ್‌ನ ಆರನೇ ಪಂದ್ಯವು ಕೊಲಂಬೊದ ಆರ್.ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಬದ್ದ ವೈರಿಗಳಾದ ಭಾರತ- ಪಾಕ್ ನಡುವೆ ನಡೆಯುತ್ತಿದೆ. ಪಾಕಿಸ್ತಾನದ ವಿರುದ್ಧ ಏಷ್ಯಾಕಪ್‌ನಲ್ಲಿ ಭಾರತದ ಪುರುಷರ ತಂಡ ಯಾವ ನಿಲುವು ತಾಳಿತ್ತೋ ಅದೇ ನಿಲುವನ್ನು ಮಹಿಳಾ ತಂಡವೂ ಮುಂದುವರೆಸಿದೆ.
ಅಂದರೆ, ಪುರುಷರ ತಂಡದಂತೆ ಮಹಿಳಾ ತಂಡವೂ ಕೂಡ ಪಾಕಿಸ್ತಾನ ತಂಡದೊಂದಿಗೆ ಕೈಕುಲುಕದಿರಲು ನಿರ್ಧರಿಸಿದೆ. ಅದರಂತೆ ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್ ಸಮಯದಲ್ಲಿ ಉಭಯ ತಂಡಗಳ ನಾಯಕಿಯರ ನಡುವೆ ಯಾವುದೇ ಹ್ಯಾಂಡ್ಶೇಕ್ ನಡೆಯಲಿಲ್ಲ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಏಷ್ಯಾಕಪ್ನಲ್ಲಿಯೂ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅವರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಅದು ಮಾತ್ರವಲ್ಲದೆ ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಹೀಗಾಗಿ ಇದುವರೆಗೂ ಭಾರತ ತಂಡಕ್ಕೆ ಟ್ರೋಫಿ ಸಿಕ್ಕಿಲ್ಲ.