ಶ್ರೀನಗರ: ಏಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ನಿರಂತರವಾಗಿ ದಾಳಿ ನಡೆಸಿದ ಕಾರಣ ಪಾಕಿಸ್ತಾನವು ಥಂಡಾ ಹೊಡೆದಿದೆ. ಕದನವಿರಾಮಕ್ಕಾಗಿ ಅಮೆರಿಕದ ಬಳಿ ಅಂಗಲಾಚಿ, ಕೊನೆಗೆ ಕದನವಿರಾಮ ಘೋಷಿಸಿರುವ ಪಾಕಿಸ್ತಾನವು ಮಗುಮ್ಮಾಗಿದೆ. ಇದರಿಂದಾಗಿ, 19 ದಿನಗಳ ಬಳಿಕ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆ (ಎಲ್ಒಸಿ) ಬಳಿ ಶಾಂತಿ ಸ್ಥಾಪನೆಯಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
“ಏಪ್ರಿಲ್ 22ರ ಪಹಲ್ಗಾಮ್ ದಾಳಿ ಬಳಿಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನವು ನಿರಂತರವಾಗಿ ದಾಳಿ ಮಾಡುತ್ತಿತ್ತು. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಈಗ ಮೇ 11ರ ರಾತ್ರಿಯಿಡೀ ಪಾಕಿಸ್ತಾನವು ಯಾವುದೇ ದಾಳಿ ಮಾಡಿಲ್ಲ. ಗುಂಡಿನ ದಾಳಿ, ಡ್ರೋನ್ ದಾಳಿ, ಕದನವಿರಾಮ ಉಲ್ಲಂಘನೆ ಸೇರಿ ಯಾವುದೇ ಚಟುವಟಿಕೆ ನಡೆದಿಲ್ಲ. 19 ದಿನಗಳ ಬಳಿಕ ಗಡಿಯಲ್ಲಿ ಶಾಂತಿ ನೆಲೆಸಿದೆ” ಎಂದು ಮೇ 12ರಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಪಹಲ್ಗಾಮ್ ದಾಳಿಯ ಬಳಿಕದ ಏಪ್ರಿಲ್ 23ರಿಂದ ಮೇ 6ರವರೆಗೆ ಗಡಿಯಲ್ಲಿ ಸಣ್ಣಪುಟ್ಟ ಫೈರಿಂಗ್ ಗಳು ನಡೆಯುತ್ತಿದ್ದವು. ಆದರೆ, ಮೇ 7ರ ಬಳಿಕ ಆರ್ಟಿಲರಿ ಶೆಲ್ಲಿಂಗ್ ಗಳು, ವಾಯುದಾಳಿಗಳು ಶುರುವಾದವು. ಭಾರತದ ರಫೇಲ್, ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳು ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಲಾಯಿತು. ಕೊನೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಡಿಯಲ್ಲಿ ಕದನವಿರಾಮ ಘೋಷಣೆಯಾಗಿದೆ.
ಭಾರತದ ನಿರಂತರ ದಾಳಿಯಿಂದ ಥಂಡಾ ಹೊಡೆದ ಪಾಕಿಸ್ತಾನವೀಗ ಶಾಂತಿ ಕಾಪಾಡಲು ಮುಂದಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಪಾಕ್ ಯಾವುದೇ ಕುತಂತ್ರ ನೀತಿ ಅನುಸರಿಸಿದರೆ, ಭಾರತವು ತಕ್ಕ ತಿರುಗೇಟು ನೀಡಲಿದೆ ಎಂದು ಕೇಂದ್ರ ಸರ್ಕಾರ, ಸೇನೆ ಈಗಾಗಲೇ ಸ್ಪಷ್ಟಪಡಿಸಿದೆ. ಇದೇ ಕಾರಣಕ್ಕಾಗಿ ಪಾಕ್ ಮಗುಮ್ಮಾಗಿದೆ ಎಂದು ಹೇಳಲಾಗುತ್ತಿದೆ.



















