ನವದೆಹಲಿ : ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗಳು ಪರಿಶಿಷ್ಟ ಜಾತಿ (SC) ಸ್ಥಾನಮಾನವನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ. ಮತಾಂತರಗೊಂಡ ವ್ಯಕ್ತಿಯು ತನ್ನ ಮೂಲ ಜಾತಿಯ ಆಧಾರದ ಮೇಲೆ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ಯಡಿ ರಕ್ಷಣೆ ಕೋರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಂಧ್ರ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಪೀಠ
ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಿಂತಾಡ ಆನಂದ್ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ, ಆಂಧ್ರಪ್ರದೇಶ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಎತ್ತಿ ಹಿಡಿಯಿತು. “ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅನುಸರಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?
ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಆನಂದ್, ತಮ್ಮ ಮೇಲೆ ಜಾತಿ ನಿಂದನೆ ಮತ್ತು ಹಲ್ಲೆ ನಡೆದಿದೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ, ಮತಾಂತರದ ನಂತರ ಅವರು ಕ್ರೈಸ್ತ ಧರ್ಮದ ಆಚರಣೆಗಳಲ್ಲಿ ಸಕ್ರಿಯರಾಗಿದ್ದರಿಂದ ಅವರು ತಮ್ಮ ಮೂಲ ಜಾತಿ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ ಎಂದು ಹೈಕೋರ್ಟ್ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆನಂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂಕೋರ್ಟ್ ಹೇಳಿದ್ದೇನು?
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಅರ್ಜಿದಾರರು ತಮಗೆ ಎಸ್‌ಸಿ ಪ್ರಮಾಣಪತ್ರ ಇದೆ ಎಂದು ವಾದಿಸಿದರೂ, ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವುದು ಮತ್ತು ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಾಬೀತಾಗಿದೆ ಎಂದು ಹೇಳಿದೆ. “ಅರ್ಜಿದಾರರು ಪುನಃ ತಮ್ಮ ಮೂಲ ಧರ್ಮಕ್ಕೆ ಮರಳಿಲ್ಲ ಅಥವಾ ಮಾದಿಗ ಸಮುದಾಯವು ಅವರನ್ನು ಮತ್ತೆ ಸ್ವೀಕರಿಸಿಲ್ಲ. ಘಟನೆ ನಡೆದ ಸಮಯದಲ್ಲಿ ಅವರು ಪ್ರಾರ್ಥನಾ ಸಭೆ ನಡೆಸುತ್ತಿದ್ದರು ಎಂಬುದು ಅವರು ಕ್ರೈಸ್ತ ಧರ್ಮದಲ್ಲೇ ಮುಂದುವರಿದಿದ್ದಾರೆ ಎಂಬುದಕ್ಕೆ ಸಾಕ್ಷಿ” ಎಂದು ಕೋರ್ಟ್ ವಿವರಿಸಿದೆ. ಈ ತೀರ್ಪು ಸಾಂವಿಧಾನಿಕ ಸೌಲಭ್ಯಗಳು ಧಾರ್ಮಿಕ ಗುರುತಿನ ಮೇಲೆ ಅವಲಂಬಿತವಾಗಿವೆ ಎಂಬ ಕಾನೂನು ನಿಲುವನ್ನು ನ್ಯಾಯಪೀಠ ಪುನರುಚ್ಚರಿಸಿದೆ.
ಇದನ್ನೂ ಓದಿ : ಇರಾನ್ ವಿರುದ್ಧ ಯುದ್ಧಕ್ಕೆ ಪ್ರಚೋದನೆ ನೀಡಿದ್ದು ನಾನಲ್ಲ, ಪೆಂಟಗನ್ ಮುಖ್ಯಸ್ಥ – ಹೊಣೆಯಿಂದ ನುಣುಚಿಕೊಂಡ ಟ್ರಂಪ್!



















