ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಲಂಚಕೋರತನ, ಅಶಿಸ್ತು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರು ಕಚೇರಿಗಳಿಗೆ ಹರಿದ ಜೀನ್ಸ್, ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಿಕೊಂಡು ಬರಬಾರದು. ನೌಕರರು ಸಭ್ಯ ಎನಿಸುವ ಉಡುಪುಗಳನ್ನು ಧರಿಸಿಕೊಂಡು ಕಚೇರಿಗೆ ತೆರಳುವ ಮೂಲಕ ಘನತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರು ಕಚೇರಿಗಳಿಗೆ ಕಾಲೇಜು ವಿದ್ಯಾರ್ಥಿಗಳಂತೆ ಬರುತ್ತಾರೆ. ಹರಿದ ಜೀನ್ಸ್ (ಫ್ಯಾಷನ್ ದೃಷ್ಟಿಯಿಂದ) ಹಾಗೂ ಸ್ಲೀವ್ ಲೆಸ್ ಬಟ್ಟೆ ಧರಿಸಿಕೊಂಡು ಬರುತ್ತಾರೆ. ಅವರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೆಚ್ಚಿನ ನೌಕರರು ತಮ್ಮ ಕುರ್ಚಿಯಲ್ಲಿಯೇ ಕುಳಿತಿರುವುದಿಲ್ಲ ಎಂಬುದು ಸೇರಿ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ಆದೇಶ ಹೊರಡಿಸಿದೆ. ಸರ್ಕಾರದ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸ್ವಾಗತಿಸಿದ್ದಾರೆ.
ಸರ್ಕಾರದ ಆದೇಶಗಳು ಏನೇನು?
• ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸರ್ಕಾರಿ ಕಚೇರಿಗಳ ನಿಗದಿತ ಪ್ರಾರಂಭ ಸಮಯವಾದ ಬೆಳಗ್ಗೆ 10.10 ಗಂಟೆಗೆ ಕಾರ್ಯಾಲಯಕ್ಕೆ ಹಾಜರಾಗಬೇಕು. ಅಲ್ಲದೆ, ಕಚೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು.
• ಕಚೇರಿ ಸಮಯದಲ್ಲಿ ಅಧಿಕೃತ ಕೆಲಸಕ್ಕಾಗಿ ಹೊರಗೆ ಹೋಗಬೇಕಾದರೆ, ಅದನ್ನು ಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣ ಅಥವಾ ಉದ್ದೇಶವನ್ನು ದಾಖಲಿಸಬೇಕು. ಇದರ ಜತೆಗೆ, ಮೇಲಧಿಕಾರಿಗಳಿಂದ ಅನುಪತಿ ಪಡೆಯಬೇಕು. ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ದಾಖಲಿಸಬೇಕು.
• ಅಧಿಕಾರಿಗಳು ಮನೆಯಿಂದ ಕಚೇರಿಗೆ ಬಂದಾಗ ಹಾಗೂ ಹೋಗುವಾಗ, ತಮ್ಮ ಬಳಿ ಎಷ್ಟು ನಗದು ಇದೆ ಎಂಬುದನ್ನು ದಾಖಲಿಸಲಬೇಕು. ಸರ್ಕಾರಿ ಕಚೇರಿಗಳಲ್ಲಿ ಲಂಚವನ್ನು ತಡೆಯಲು ಸರ್ಕಾರ ಈ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಬಿಕ್ಲು ಶಿವು ಹತ್ಯೆ ಕೇಸ್ | ಬಂಧನ ಭೀತಿಯಿಂದ ತಲೆಮರೆಸಿಕೊಂಡ ಬೈರತಿ ಬಸವರಾಜುಗೆ ಲುಕ್‌ಔಟ್ ನೋಟಿಸ್ ಸಾಧ್ಯತೆ



















