ಕೊಪ್ಪಳ : ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ನಡೆಯುವುದಿಲ್ಲ. ಅದೆಲ್ಲವೂ ಬರೀ ಭ್ರಾಂತಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮದೇ ಸ್ಟೈಲ್ನಲ್ಲಿ ವಿಪಕ್ಷಕ್ಕೆ ಉತ್ತರ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಇಂದು (ಅ.6) ಕೊಪ್ಪಳ ಜಿಲ್ಲೆಯಲ್ಲಿ 2005 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ, ಕಿಮ್ಸ್ ಬೋಧಕ ಆಸ್ಪತ್ರೆ, ಆಸ್ಪತ್ರೆ ಆವರಣದಲ್ಲಿ ನಂದಿನಿ ಪಾರ್ಲರ್, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ, ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಯಾವ ಕ್ರಾಂತಿಯೂ ನಡೆಯುವುದಿಲ್ಲ. ಅದೆಲ್ಲವೂ ಬರೀ ಭ್ರಾಂತಿ ಅಷ್ಟೇ. ಸಮಾಜ ನಿರ್ಮಾಣ, ಸರ್ವರ ಅಭಿವೃದ್ಧಿಗೆ ಸಮೀಕ್ಷೆ ಮಾಡುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಸಮೀಕ್ಷೆ ವಿರೋಧಿಸುವವರು ಸಮಾಜದ ವಿರೋಧಿಗಳಿಗೆ ಸಮ. ಯೋಜನೆ ರೂಪಿಸಲು ಅಂಕಿ ಅಂಶಗಳು ಬೇಕು. ಸಮೀಕ್ಷೆ ಬೇಡ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೇಂದ್ರ ನಡೆಸುವ ಜಾತಿಗಣತಿ ವಿರೋಧಿಸುತ್ತಾರಾ? ಬದಲಾವಣೆ ಬೇಡದವರು ಬೇಡ ಎನ್ನುತ್ತಾರೆಂದು ಸಮರ್ಥಿಸಿಕೊಂಡಿದ್ದಾರೆ.