ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಕಹಿ ಸುದ್ದಿ ನೀಡಿದೆ. ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ಹಾಗೂ ಅಮೃತ ಭಾರತ್ II ರೈಲುಗಳಲ್ಲಿ ಓಡಾಡುವವರು ನಿಗದಿತ ಸಮಯವನ್ನು ಮೀರಿ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಯಾವುದೇ ರಿಫಂಡ್ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯವು ರೈಲ್ವೆ ಪ್ರಯಾಣಿಕರ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಹೊಸ ಆದೇಶವನ್ನೂ ಹೊರಡಿಸಿದೆ.
ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ಹಾಗೂ ಅಮೃತ ಭಾರತ್ II ರೈಲುಗಳ ಟಿಕೆಟ್ ಬುಕ್ ಮಾಡಿದವರು ರೈಲು ಸಂಚಾರ ಆರಂಭಿಸುವ 8 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಬೇಕು. ಸಂಚಾರ ಆರಂಭಿಸುವ 8 ಗಂಟೆ ಒಳಗೆ ಕ್ಯಾನ್ಸಲ್ ಮಾಡಿದರೆ ರಿಫಂಡ್ ಆಗುವುದಿಲ್ಲ. ರೈಲು ಸಂಚಾರ ಆರಂಭಿಸುವ 72 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್ ಮೊತ್ತದಲ್ಲಿ ಶೇ.25ರಷ್ಟು ಮೊತ್ತವನ್ನು ರಿಫಂಡ್ ಮಾಡಲಾಗುತ್ತದೆ.
ಅಂದರೆ, ನೀವು ಒಂದು ಸಾವಿರ ರೂಪಾಯಿ ಮೌಲ್ಯದ ಟಿಕೆಟ್ ಬುಕ್ ಮಾಡಿ, ರೈಲು ಹೊರಡುವ 72 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ, 250 ರೂಪಾಯಿ ರಿಫಂಡ್ ಆಗುತ್ತದೆ. ಇನ್ನು 72 ಗಂಟೆಗಿಂತ ಹೆಚ್ಚಿನ ಅವಧಿಗೂ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶೇ.50ರಷ್ಟು ಅಂದರೆ, 500 ರೂಪಾಯಿ ರಿಫಂಡ್ ಆಗಲಿದೆ ಎಂದು ರೈಲ್ವೆ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.
ಹೊಸ ನಿಯಮಗಳು ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ಹಾಗೂ ಅಮೃತ ಭಾರತ್ II ರೈಲುಗಳಲ್ಲಿ ಪ್ರಯಾಣಿಸುವವರಿಗೆ ಮಾತ್ರ ಅನ್ವಯವಾಗುತ್ತವೆ. ಉಳಿದಂತೆ, ಯಾವುದೇ ಎಕ್ಸ್ ಪ್ರೆಸ್ ರೈಲುಗಳ ಟಿಕೆಟ್ ರದ್ದತಿ ಕುರಿತು ಮೊದಲಿನ ನಿಯಮಗಳೇ ಅನ್ವಯವಾಗುತ್ತವೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ : ಪಾಕ್ ಕದನಕ್ಕೂ ಮುನ್ನ ಭಾರತಕ್ಕೆ ಸ್ಪಿನ್ ಸಂಕಷ್ಟ | ಕೊಲಂಬೊದಲ್ಲಿ ಎದುರಾಗಲಿದೆಯೇ ಕಠಿಣ ಸವಾಲು?



















