ಕರಾಕಸ್: ಅಮೆರಿಕ ಸೈನ್ಯವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ಕರೆದೊಯ್ದ ಬಳಿಕ, ವೆನೆಜುವೆಲಾವು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಾಜಧಾನಿ ಕರಾಕಸ್‌ನಲ್ಲಿ ಬಾಂಬ್ ದಾಳಿಗಳ ಪರಿಣಾಮವಾಗಿ ವಿದ್ಯುತ್ ವ್ಯವಸ್ಥೆ ಕುಸಿದು, ಸಂವಹನ ಕಡಿದುಹೋಗಿದೆ. ಪರಿಣಾಮ ದೇಶದಾದ್ಯಂತ ಕತ್ತಲೆ ಮತ್ತು ಭಯದ ವಾತಾವರಣ ಆವರಿಸಿದೆ.
ಕರಾಕಸ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸುನಿಲ್ ಮಲ್ಹೋತ್ರಾ, ದಾಳಿಯ ನಂತರದ ಪರಿಸ್ಥಿತಿಯನ್ನು ವಿವರಿಸಿ, ಆತಂಕ ವ್ಯಕ್ತಪಡಿಸಿದ್ದಾರೆ. “ಅಮೆರಿಕ ವಿಮಾನಗಳು ರಾಜಧಾನಿಯ ವಿಮಾನ ನಿಲ್ದಾಣದ ಜೊತೆಗೆ, 100 ಕಿಮೀ ದೂರದ ವಾಯುನೆಲೆಯ ಮೇಲೂ ದಾಳಿ ನಡೆಸಿವೆ. ಫುಯರ್ಟೆ ಟಿಯುನಾ ಸೇನಾ ನೆಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಅಲ್ಲಿ ಪವರ್ ಗ್ರೀಡ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ,” ಎಂದು ಹೇಳಿದ್ದಾರೆ.

ಆಹಾರ, ಔಷಧಕ್ಕೆ ಸರತಿ ಸಾಲು
ದಾಳಿಯ ನಂತರ ನಗರದಲ್ಲಿನ ಎಲ್ಲಾ ದೊಡ್ಡ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದು, ಕೇವಲ ಕೆಲವು ಚಿಕ್ಕ ‘ಕಿರಾಣಿ’ ಅಂಗಡಿಗಳು ಮಾತ್ರ ತೆರೆದಿವೆ. “ಪ್ರತಿ ಬ್ಲಾಕ್‌ನಲ್ಲೂ 500–600 ಜನರು ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬ್ರೆಡ್ ಅಂಗಡಿಗಳ ಹೊರಗೆ ಅತಿ ಉದ್ದದ ಸಾಲುಗಳಿದ್ದು, ಔಷಧಿ ಅಂಗಡಿಗಳಲ್ಲಿ ಹಾಗೂ ಟಿನ್ನಿನಲ್ಲಿ ಸಿಗುವ ಆಹಾರಕ್ಕಾಗಿ ಜನ ಗಂಟೆಗಳ ಕಾಲ ಕಾಯುತ್ತಿದ್ದಾರೆ,” ಎಂದು ಮಲ್ಹೋತ್ರಾ ಹೇಳಿದ್ದಾರೆ.
ಮೊಬೈಲ್ ಚಾರ್ಜಿಂಗ್‌ಗೂ ಹೋರಾಟ
ವಿದ್ಯುತ್ ಸ್ಥಗಿತಗೊಂಡಿರುವ ಕಾರಣ, ಜನರು ತಮ್ಮ ಮೊಬೈಲ್ ಚಾರ್ಜ್ ಮಾಡಲು ಕಳ್ಳ ವಿಧಾನವನ್ನು ಅನುಸರಿಸುತ್ತಿದ್ದಾರೆ. “ಬೀದಿಯ ಒಂದು ಕಂಬದಲ್ಲಿ ಮಾತ್ರ ವಿದ್ಯುತ್ ಇದೆ. ಅಲ್ಲಿ ಹಾಟ್ ಡಾಗ್ ಮಾರುವವರು ಅಕ್ರಮವಾಗಿ ಕೇಬಲ್ ಹಾಕಿದ್ದಾರೆ. ಜನರು ಗಂಟೆಗಳ ಕಾಲ ಕಾಯುತ್ತಾ ಫೋನ್ ಚಾರ್ಜ್ ಮಾಡುತ್ತಿದ್ದಾರೆ. ನಾನು ಸಂಜೆ 4ಕ್ಕೆ ಹೋಗಿದ್ದು, ರಾತ್ರಿ 11ಕ್ಕೆ ಮಾತ್ರ ವಾಪಸ್ ಬಂದೆ. ಆ ರೀತಿಯ ದುಸ್ಥಿತಿ ಇದೆ,” ಎಂದು ಅವರು ವಿವರಿಸಿದ್ದಾರೆ.
“ಜನರೊಳಗೆ ಭಯ – ಪ್ರತಿಭಟನೆಯ ಮಾತೇ ಇಲ್ಲ”
“ಜನರು ಮನೆಗಳೊಳಗೆ ಕುಳಿತಿದ್ದಾರೆ. ಬೀದಿಗೆ ಯಾರೂ ಬರುತ್ತಿಲ್ಲ. ಹೊರಗೆ ಕಾಲಿಡಲು ಹೆದರುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಪ್ರತಿಭಟನೆ ವೇಳೆ ನೂರಾರು ಜನ ಸಾವನ್ನಪ್ಪಿದ್ದರು, ಮಕ್ಕಳನ್ನೂ ಬಂಧಿಸಲಾಗಿತ್ತು. ಅದರಿಂದಾಗಿ ಈಗ ಎಲ್ಲರೂ ಮೌನವಾಗಿದ್ದಾರೆ. ಸುಮಾರು 70-80 ಲಕ್ಷ ಜನ ಈಗಾಗಲೇ ದೇಶ ತೊರೆದಿದ್ದಾರೆ” ಎಂದೂ ಮಲ್ಹೋತ್ರಾ ಹೇಳಿದ್ದಾರೆ.
ಭಾರತೀಯ ಸಮುದಾಯದಿಂದ ವಾಟ್ಸ್ ಆ್ಯಪ್ ಗ್ರೂಪ್
ಕರಾಕಸ್‌ನಲ್ಲಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆ ತುಂಬಾ ಕಡಿಮೆ. ಆದರೂ, ಭಾರತದ ರಾಯಭಾರ ಕಚೇರಿ ವಿಶೇಷ ವಾಟ್ಸ್ಆ್ಯಪ್ ಗುಂಪು ರಚಿಸಿ, ಅಲ್ಲಿನವರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿದೆ ಹಾಗೂ ತುರ್ತು ಸೂಚನೆಗಳನ್ನು ಹಂಚಿಕೊಳ್ಳುತ್ತಿದೆ.
‘ಆಪರೇಷನ್ ಅಬ್ಸೊಲ್ಯೂಟ್ ರಿಸಾಲ್ವ್’
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಡಿ ಅಮೆರಿಕ ಪಡೆಗಳು ಶುಕ್ರವಾರ ತಡರಾತ್ರಿ ಕರಾಕಸ್‌ನಲ್ಲಿ ವಾಯು ದಾಳಿ ನಡೆಸಿ, ಅಧ್ಯಕ್ಷ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಬಂಧಿಸಿದ್ದು, ಇಬ್ಬರನ್ನೂ ನ್ಯೂಯಾರ್ಕ್‌ಗೆ ಕರೆದೊಯ್ದು, ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು “ನಾರ್ಕೋ-ಟೆರರಿಸಂ” ಆರೋಪಗಳನ್ನು ಹೊರಿಸಲಾಗಿದೆ. ವೆನೆಜುವೆಲಾ ಸರ್ಕಾರ ಇದನ್ನು ತೀವ್ರವಾಗಿ ಖಂಡಿಸಿ, ಇದು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಮತ್ತು ತನ್ನ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕದ ನಿಯಂತ್ರಣ ಸಾಧನೆ ಪ್ರಯತ್ನ ಎಂದು ಆರೋಪಿಸಿದೆ.
ಇದನ್ನೂ ಓದಿ: ನ್ಯೂಯಾರ್ಕ್ ಜೈಲಿನಲ್ಲಿ ಮಡುರೊ : ಉಪಾಧ್ಯಕ್ಷೆ ರೊಡ್ರಿಗಸ್‌ಗೆ ವೆನೆಜುವೆಲಾದ ಹಂಗಾಮಿ ನೇತೃತ್ವ



















