ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನೊಳಗೊಂಡಂತೆ ಇತರ ದೌರ್ಜನ್ಯಗಳ ಆರೋಪಗಳ ಬಗ್ಗೆ ಎಸ್‌ಐಟಿ ಸೇರಿದಂತೆ ಯಾವುದೇ ತನಿಖೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳದ ಬಗ್ಗೆ ವೀಡಿಯೋ ಮಾಡಿ ಕ್ಷೇತ್ರದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ಷಡ್ಯಂತ್ರ ನಡೆಸಲಾಗಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ಹರಿವಿನ ಬಗ್ಗೆ ಶಂಕೆ ಇದೆ. ಆದ್ದರಿಂದ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ದಕ್ಕಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಯಲ್ಲಿಂದು(ಮಂಗಳವಾರ) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಂಪಲ, ನಮಗೆ ಎಸ್‌ಐಟಿ ತನಿಖೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಹಿಂದೂ ಧರ್ಮ ಕ್ಷೇತ್ರದ ಬಗ್ಗೆ ಆರೋಪಿಸಿ ಎಐ ಮೂಲಕ ಸಮೀರ್ ಎಂ.ಡಿ. ಮಾಡಿರುವ ವೀಡಿಯೋದಿಂದ ಪ್ರಕರಣ ಅಂತಾರಾಷ್ಟ್ರೀಯವಾಗಿ ಪ್ರಸಾರವಾಗಿದೆ. ಇದಕ್ಕೆ ಸಾಕಷ್ಟು ಹಣ ಪೂರೈಕೆಯಾಗಿರುವ ಅನುಮಾನವಿದ್ದು, ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ವೀಡಿಯೋ ಮೂಲಕ ಅನ್ಯ ಧರ್ಮದ ವ್ಯಕ್ತಿ ಇಷ್ಟೊಂದು ಆರೋಪ ಮಾಡಿದರೂ ಹಿಂದೂ ಧರ್ಮ ಸಹನೆಯಿಂದ ಇದೆ. ಅದೇ ಇನ್ನೊಂದು ಧರ್ಮದ ಬಗ್ಗೆ ಈ ರೀತಿ ಆಗಿದ್ದರೆ ಕತೆ ಏನಾಗುತಿತ್ತು ಎಂದು ಪ್ರಶ್ನಿಸಿದ ಸತೀಶ್ ಕುಂಪಲ, ಸಮೀರ್ ಎಂ.ಡಿ.ಯನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್‌ಐಟಿಯಿಂದ ಪ್ರಸಕ್ತ ನಡೆಯುತ್ತಿರುವ ತನಿಖೆಯ ಬಗ್ಗೆ ವಿಶ್ವಾಸ ಇಲ್ಲದೆ ಎನ್‌ಐಎಗೆ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಸಕ ಡಾ. ಭರತ್ ಶೆಟ್ಟಿ, ಎಸ್‌ಐಟಿ ತನಿಖೆ ಮೇಲೆ ಯಾವುದೇ ಆಕ್ಷೇಪವಿಲ್ಲ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಅದಕ್ಕೆ ಸಾಕಷ್ಟು ಮಂದಿ ಪ್ರಾಯೋಜಕತ್ವ ನೀಡಿದ್ದಾರೆ. ಹಣದ ವ್ಯವಹಾರ ನಡೆದಿದೆ. ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ (ಎಐ) ವೀಡಿಯೋ ಮಾಡಿ ಹಂಚಲು ಹಣದ ಅಗತ್ಯವಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
ಹಣದ ವ್ಯವಹಾರದ ಬಗ್ಗೆ ಅಥವಾ ಎಷ್ಟು ಹಣದ ವ್ಯವಹಾರ ನಡೆದಿದೆ ಎಂಬ ಬಗ್ಗೆ ದಾಖಲೆ ಇದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಅನುಮಾನವಿದೆ, ತನಿಖೆಯಾಗಲಿ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.
“ಸೆ.1ರಂದು ಬಿಜೆಪಿಯಿಂದ ಧರ್ಮಸ್ಥಳ ಭೇಟಿ”
ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರದಿಂದ ಒಂದು ಲಕ್ಷದವರೆಗೆ ಬಿಜೆಪಿ ಕಾರ್ಯಕರ್ತರು ಸೆಪ್ಟೆಂಬರ್ 1ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಧಾರ್ಮಿಕ ನಂಬಿಕೆ ಜತೆ ನಾವಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಈ ಭೇಟಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.