ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಇತ್ತೀಚೆಗೆ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಇಪಿಎಫ್ ಸದಸ್ಯರು ಸುಲಭವಾಗಿ ಮಾಹಿತಿ ಅಪ್ಡೇಟ್ ಮಾಡುವುದು, ಕ್ಲೇಮ್ ಸಲ್ಲಿಸುವುದು ಸೇರಿ ಮಹತ್ವದ ಬದಲಾವಣೆ ಮಾಡಿದೆ. ಇದರ ಬೆನ್ನಲ್ಲೇ, ಇಪಿಎಫ್ಒ ಈಗ ಮತ್ತೊಂದು ನಿಯಮವನ್ನು ಸರಳಗೊಳಿಸಿದೆ. ಉದ್ಯೋಗಿಗಳು ಕಂಪನಿ ಬದಲಿಸಿದಾಗ, ಒಂದು ವೇಳೆ ಸೇವಾ ಅವಧಿಯ ದಿನವು ಒಂದೇ ಆಗಿದ್ದರೂ ಕ್ಲೇಮ್ ರಿಜೆಕ್ಟ್ ಮಾಡುವಂತಿಲ್ಲ ಎಂದು ಇಪಿಎಫ್ಒ ಆದೇಶ ಹೊರಡಿಸಿದೆ.
ಇಪಿಎಫ್ಒ ಸದಸ್ಯರು ಮಾಡಿದ ಕೆಲವು ತಪ್ಪುಗಳಿಂದಾಗಿ ಸೇವಾ ಅವಧಿ ಒಂದೇ ಆಗಿದ್ದರೂ, ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಎಂದು ಇಪಿಎಫ್ಒ ಹೇಳಿದೆ. ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಒಬ್ಬ ವ್ಯಕ್ತಿ ಎರಡು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಒಂದೇ ಸಮಯದಲ್ಲಿ ತೋರಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಉದಾಹರಣೆಗೆ, ಒಂದು ಕಂಪನಿಯಲ್ಲಿ ಕೆಲಸ ಬಿಟ್ಟ ದಿನಾಂಕ ಮತ್ತು ಇನ್ನೊಂದು ಕಂಪನಿಯಲ್ಲಿ ಸೇರಿದ ದಿನಾಂಕ ಒಂದೇ ಆಗಿರುವುದು. ಇದು ಕೆಲವು ತಪ್ಪುಗಳಿಂದ ಆಗಬಹುದು. ಇದರಿಂದ ನಿಮ್ಮ ಪಿಎಫ್ ಹಣ ವರ್ಗಾವಣೆಗೆ ತೊಂದರೆಯಾಗಬಹುದು. ಹಾಗಾಗಿ ಇಪಿಎಫ್ಒ ಹೊಸ ಆದೇಶ ಹೊರಡಿಸಿದೆ.
ನೌಕರರ ಸೇವಾ ಅವಧಿ ಒಂದೇ ಆಗಿದ್ದರೆ, ಇಪಿಎಫ್ಒ ಇನ್ನುಮುಂದೆ ಉದ್ಯೋಗಿಗಳಿಂದ ವಿವರಣೆ ಕೇಳಬಹುದು. ನಿಜವಾದ ಕಾರಣವಿದ್ದರೆ, ಸದಸ್ಯರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಒಂದು ವೇಳೆ, ಸದಸ್ಯರಿಗೆ ಯಾವುದೇ ತೊಂದರೆಯಾದರೆ ಇಪಿಎಫ್ಒ ಸಹಾಯ ಮಾಡುತ್ತದೆ.