ಬೆಂಗಳೂರು : ಮುಂಬರುವ ಐಪಿಎಲ್ 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರನ್ನು ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 17ರಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ಸೀಸನ್‌ನಲ್ಲಿ ರೋಹಿತ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಬಳಸಿಕೊಂಡ ನಿರ್ಧಾರದ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ ವರ್ಷ ರೋಹಿತ್ ಅವರನ್ನು ಕೇವಲ ಬ್ಯಾಟಿಂಗ್‌ಗೆ ಸೀಮಿತಗೊಳಿಸಿ ಫೀಲ್ಡಿಂಗ್ ಸಮಯದಲ್ಲಿ ವಿಶ್ರಾಂತಿ ನೀಡಿದ್ದ ಕ್ರಮವು ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಚರ್ಚೆಗೆ ಹಾಗೂ ಟೀಕೆಗೆ ಗುರಿಯಾಗಿತ್ತು.
ಕಳೆದ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಸಣ್ಣಪುಟ್ಟ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದರು, ಈ ಹಿನ್ನೆಲೆಯಲ್ಲಿ ಅವರ ಕೆಲಸದ ಒತ್ತಡವನ್ನು ರ್ವಹಿಸುವುದು ತಂಡಕ್ಕೆ ಅನಿವಾರ್ಯವಾಗಿತ್ತು ಎಂದು ಜಯವರ್ಧನೆ ವಿವರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಹಸ್ತಾಂತರವಾದ ಸಂದರ್ಭದಲ್ಲಿ ರೋಹಿತ್ ಅವರ ದೈಹಿಕ ಫಿಟ್‌ನೆಸ್ ಸಂಪೂರ್ಣವಾಗಿ ಇರಲಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಮೈದಾನದಲ್ಲಿ ಹೆಚ್ಚು ಸಮಯ ಇರಿಸದೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿ ಬಳಸಿಕೊಳ್ಳಲಾಗಿತ್ತು. ಆದರೆ, ಈ ವರ್ಷ ಪರಿಸ್ಥಿತಿ ಬದಲಾಗಿದ್ದು, ರೋಹಿತ್ ಅವರನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮೈದಾನದಲ್ಲಿ ಆಡಿಸಲು ಬಯಸುವುದಾಗಿ ಕೋಚ್ ತಿಳಿಸಿದ್ದಾರೆ.
ಹೆಚ್ಚಿನ ಆಲ್ರೌಂಡರ್ಗಳ ಬಳಕೆ
ತಂಡದ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ ಜಯವರ್ಧನೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಸ್ತುತ ಹೆಚ್ಚಿನ ಸಂಖ್ಯೆಯ ಆಲ್-ರೌಂಡರ್‌ಗಳಿದ್ದಾರೆ. ಪಂದ್ಯದ ಸಂದರ್ಭದಲ್ಲಿ ನಾಯಕನಿಗೆ ಬೌಲಿಂಗ್ ಆಯ್ಕೆಗಳು ಬೇಕಾದಾಗ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಎದುರಾಳಿ ತಂಡವನ್ನು ಅವಲಂಬಿಸಿರುತ್ತದೆ. “ನಮ್ಮ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಹೊರತುಪಡಿಸಿ ಉಳಿದವರೆಲ್ಲರೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಲ್-ರೌಂಡರ್‌ಗಳಾಗಿದ್ದಾರೆ. ಹೀಗಿರುವಾಗ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ನಿರ್ಧಾರವು ಸಂಕೀರ್ಣವಾಗಿರುತ್ತದೆ” ಎಂದು ಅವರು ಲಘು ಧಾಟಿಯಲ್ಲಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದು, ರೋಹಿತ್ ಶರ್ಮಾ ಅವರ ಫಾರ್ಮ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಳೆದ ಎರಡು ಸೀಸನ್‌ಗಳಲ್ಲಿ ರೋಹಿತ್ ತಲಾ 400ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವರು ಪೂರ್ಣ ಪ್ರಮಾಣದಲ್ಲಿ ಮೈದಾನಕ್ಕಿಳಿದು ಮುಂಬೈ ಪರ ಅಬ್ಬರಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ರೋಹಿತ್ ಅವರ ಅನುಭವ ಮತ್ತು ಆಟ ತಂಡದ ಮೇಲೆ ದೊಡ್ಡ ಪ್ರಭಾವ ಬೀರಲಿದ್ದು, ಅವರು ಬೆಂಚ್ ಮೇಲೆ ಕೂರುವುದಕ್ಕಿಂತ ಮೈದಾನದಲ್ಲಿ ಇರುವುದೇ ತಂಡಕ್ಕೆ ಶಕ್ತಿ ಎಂದು ಜಯವರ್ಧನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ.. ಆಲ್ ದಿ ಬೆಸ್ಟ್!



















