ನಿಜಕ್ಕೂ ಇದು ಅಚ್ಚರಿಯಾದರೂ ಸತ್ಯ…ಭಾರತ ಪಾಕಿಸ್ಥಾನ ನಡುವೆ ನಿಜಕ್ಕೂ ಯುದ್ಧ ಶುರುವಾಗೇಬಿಟ್ಟಿದೆ. ಅರೆ ಇದೇನಪ್ಪಾ ಎಲ್ಲಿ ಯುದ್ಧ, ಟ್ಯಾಂಕರ್ ಗಳು ಆರ್ಭಟಿಸುತ್ತಿವೆಯಾ?.ಕ್ಷಿಪಣಿಗಳೇ ಸಿಡಿದಿಲ್ಲ.
ಹೌದು!.ನಿಮ್ಮ ಕಲ್ಪನೆಯ ಯುದ್ಧಕ್ಕೂ ಈಗ ಆರಂಭವಾಗಿರುವ ಸಮರಕ್ಕೂ ಬಹಳ ವ್ಯತ್ಯಾಸವಿದೆ. ನೆನಪಿರಲಿ ಈ ಯುದ್ಧದಲ್ಲಿ ಸ್ವಲ್ಪ ಯಾಮಾರಿದರೂ ಅಪಾರ ಸಾವು ನೋವು ಸಂಭವಿಸಲಿದೆ. ಹಾಗಂತಾ ಇದು ಸಿಂದೂ ಸಮರ.
ಏನಿದು ಸಿಂಧೂ ಜಲ ಒಪ್ಪಂದ?
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಅಂತಾರಾಷ್ಟ್ರೀಯ ಒಪ್ಪಂದವೇ ಸಿಂಧೂ ಜಲ ಒಪ್ಪಂದ (Indus Waters Treaty – IWT). ವಿಶ್ವಬ್ಯಾಂಕ್‌ನ ಮಧ್ಯಸ್ಥಿಕೆಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಉಭಯ ರಾಷ್ಚ್ರಗಳು ಸಹಿ ಹಾಕಿದವು. ಸಿಂಧೂ ನದಿಯ ಆರು ಉಪನದಿಗಳ ನೀರಿನ ಹಂಚಿಕೆಯನ್ನು ನಿಯಂತ್ರಿಸುವ ಒಪ್ಪಂದ ಇದಾಗಿದೆ. 1960ರ ಸೆಪ್ಟೆಂಬರ್ 19ರಂದು ಭಾರತದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಆಗಿನ ಅಧ್ಯಕ್ಷ ಅಯೂಬ್ ಖಾನ್‌ರವರು ಈ ಒಪ್ಪಂದಕ್ಕೆ ಕರಾಚಿಯಲ್ಲಿ ಸಹಿ ಹಾಕಿದ್ದರು. ಸಿಂಧೂ, ಝೇಲಂ, ಚೇನಾಬ್, ರಾವಿ, ಬಿಯಾಸ್, ಮತ್ತು ಸಟ್ಲೆಜ್ ನದಿಗಳ ನೀರಿನ ಹಂಚಿಕೆಯನ್ನು ಈ ಒಪ್ಪಂದವು ನಿರ್ಧರಿಸಿತು.
ಒಪ್ಪಂದದಲ್ಲಿ ಇರೋದಾದ್ರು ಏನು?
ಒಪ್ಪಂದದ ಅನ್ವಯ, ಪೂರ್ವದ ನದಿಗಳಾದ ರಾವಿ, ಬಿಯಾಸ್, ಸಟ್ಲೆಜ್ ಗಳ ಸಂಪೂರ್ಣ ನೀರಿನ (ವಾರ್ಷಿಕವಾಗಿ 41 ಶತಕೋಟಿ ಘನ ಮೀಟರ್‌ಗಳು) ಬಳಕೆಯ ಹಕ್ಕನ್ನು ಭಾರತಕ್ಕೆ ನೀಡಲಾಯಿತು. ಅದೇ ರೀತಿ, ಪಶ್ಚಿಮದ ನದಿಗಳಾದ ಸಿಂಧೂ, ಝೇಲಂ, ಚೇನಾಬ್ ನದಿಗಳ ನೀರಿನ (ವಾರ್ಷಿಕವಾಗಿ 99 ಶತಕೋಟಿ ಘನ ಮೀಟರ್‌ಗಳು) ಬಹುಪಾಲು ಬಳಕೆಯ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಭಾರತವು ಈ ನದಿಗಳ ನೀರನ್ನು ಸೀಮಿತ ಕೃಷಿ ಬಳಕೆಗೆ ಮತ್ತು ಜಲವಿದ್ಯುತ್ ಉತ್ಪಾದನೆ, ನೌಕಾಯಾನ, ಮೀನು ಸಾಕಾಣಿಕೆ ಇತ್ಯಾದಿಗಳಿಗೆ ಬಳಸಬಹುದು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.
ಸಿಂಧೂ ಜಲ ಒಪ್ಪಂದ ಅನಿರ್ದಿಷ್ಟಾವಧಿಗೆ ಅಮಾನತು
ಈ ಒಪ್ಪಂದವು 1965, 1971, ಮತ್ತು 1999ರ ಯುದ್ಧಗಳಂತಹ ಭಾರತ-ಪಾಕಿಸ್ತಾನದ ಘರ್ಷಣೆಗಳನ್ನೂ ಒಳಗೊಂಡಂತೆ ಹಲವು ದಶಕಗಳ ಕಾಲ ಅಂದರೆ ಇತ್ತೀಚಿನವರೆಗೂ ಉಳಿದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ (2025ರ ಏಪ್ರಿಲ್ 22ರಂದು) ಜಮ್ಮು ಕಾಶ್ಮೀರದ ಪೆಹಲ್ಗಾಮ್ ಎಂಬಲ್ಲಿನ ಬೈಸರನ್ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಘಟನೆಗೂ, ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಕಾರಣಕ್ಕೆ ಭಾರತ ಸರ್ಕಾರವು ಪ್ರತೀಕಾರದ ಕ್ರಮವಾಗಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದಾಗಿ ಘೋಷಿಸಿದೆ. ಉಗ್ರರ ಈ ದಾಳಿಯ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳಿರುವ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಭಾರತ ಸ್ಪಷ್ಟನೆ ನೀಡಿದೆ. “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ಒಪ್ಪಂದವನ್ನು ಅಮಾನತಿನಲ್ಲಿಡಲಾಗುವುದು” ಎಂದೂ ಭಾರತ ಘೋಷಿಸಿದೆ. ಒಪ್ಪಂದವು ಅಮಾನತುಗೊಂಡಿರುವ ಕಾರಣ, ಭಾರತವು ಈಗ ಒಪ್ಪಂದದ ಷರತ್ತುಗಳಿಗೆ ಬದ್ಧವಾಗಿರಬೇಕಾದ ಅಗತ್ಯವಿಲ್ಲ. ಅಲ್ಲದೇ, ಪಾಕಿಸ್ತಾನಕ್ಕೆ ನೀರಿನ ಹರಿವಿನ ಮಾಹಿತಿಯನ್ನು ಭಾರತವು ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ ಮತ್ತು ಪಾಕಿಸ್ತಾನದಿಂದ ಯಾವುದೇ ತಾಂತ್ರಿಕ ತಪಾಸಣೆ ಭೇಟಿಗಳಿಗೂ ಭಾರತ ಅವಕಾಶ ಕಲ್ಪಿಸುವುದಿಲ್ಲ..
ಪಾಕ್ ನಲ್ಲಿ ಅನ್ನ-ನೀರಿಗೆ ಶುರುವಾಗುತ್ತಾ ಹಾಹಾಕಾರ
ಸಿಂಧೂ ನದಿಯನ್ನೇ ಆಶ್ರಯಿಸಿ ಪಾಕಿಸ್ಥಾನ ಉಸಿರಾಡ್ತಿದೆ. ಕರಾಚಿ, ರಾವಲ್ಪಿಂಡಿ, ಮುಲ್ತಾನ್ ಸೇರಿದಂತೆ ಬಹುತೇಕ ನಗರಗಲಿಗೆ ಸಿಂಧೂ ನದಿ ನೀರೇ ಜೀವನಾಧಾರ. ಇನ್ನು ಈ ಪುಟ್ಟ ರಾಷ್ಟ್ರದ ಶೇಕಡಾ 80ರಷ್ಟು ಕೃಷಿಯೂ ಸಿಂಧೂ ನೀರನ್ನೇ ಅವಲಂಬಿಸಿದೆ. ಹಾಗಂತಾ ಪಾಕಿಸ್ಥಾನದಲ್ಲಿ ದೊಡ್ಡ ಮಟ್ಟದ ಜಲಾಶಯಗಳಿಲ್ಲ. ಸದ್ಯಕ್ಕಿರುವ ನೀರಿನ ಸಂಗ್ರಹಣಾ ಪ್ರಮಾಣವನ್ನೇ ಲೆಕ್ಕಕ್ಕೆ ತೆಗೆದುಕೊಂಡ್ರೆ ಮುಂದಿನ 20 ದಿನಗಳಲ್ಲಿ ಸಿಂಧೂ ಜಲ ಮೂಲ ಬತ್ತಿಹೋಗುತ್ತೆ. ಅಲ್ಲಿಗೆ ಹತ್ತಾರು ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಕೃಷಿಗೆ ನೀರಿಲ್ಲದೆ ಫಸಲು ಒಣಗಿದ್ರೆ, ಆಹಾರ ಅಭಾವ ಹೆಚ್ಚಾಗುತ್ತೆ. ದರಗಳು ದುಪ್ಪಟ್ಟಾಗುತ್ತೆ. ಈಗಾಗಲೇ ಆರ್ಥಿಕವಾಗಿ ಕಂಗಾಲಾಗಿರೋ ಪಾಕ್ ನಲ್ಲಿ ದಿನನಿತ್ಯ ಬಳಕೆ ವಸ್ತುಗಳ ಬೆಲೆಯೇ ಗಗನಚುಂಬಿಯಾಗಿವೆ. ಇದರ ನಡುವೆ ಸಿಂಧೂ ನದಿ ಏಟು ಬಿದ್ರೆ, ಪಾಕ್ ನಲ್ಲಿ ದಂಗೆಗಳು ಶುರುವಾಗಬಹುದು. ಅಪಾರ ಸಾವು ನೋವು ಸಂಭವಿಸಬಹುದು. ಹೀಗಾಗಿ ಸಿಂಧೂ ಸಮರ ಮೇಲ್ನೋಟಕ್ಕೆ ಜಲ ಯುದ್ಧವಾಗಿದ್ರೂ ಅದು ಕೂಡಾ ರಕ್ತಸಿಕ್ತವಾಗೋ ಕಾಲ ಸನ್ನಿಹಿತವಾಗ್ತಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.



















