ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಕೇವಲ 25 ರನ್ ಗಳಿಗೆ ಹೋರಾಟ ಮುಗಿಸಿದರು. ಸಂಜು ಸ್ಯಾಮ್ಸನ್ ಕೇವಲ 10 ರನ್ ಗಳಿಗೆ ಒಟ್ ಆದರೆ, ಅಭಿಷೇಕ್ ಶರ್ಮಾ 16 ರನ್ ಗಳಿಸಿದರು. ನಾಯಕ ಸೂರ್ಯ ಕೂಡ 8 ರನ್ ಗೆ ಸುಸ್ತಾದರು. ಹೀಗಾಗಿ ಆರಂಭಿಕ ಆಘಾತ ಕಾಡಿತ್ತು. ಆದರೆ, ನಂತರ ಆಗಿದ್ದೇ ಬೇರೆ.
ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಆಡುವ ಮೂಲಕ ನಿರೀಕ್ಷೆಯನ್ನೇ ಡಬಲ್ ಮಾಡಿದ್ದರು. ಅಲ್ಲಿಯವರೆಗೂ ಭಾರತ ತಂಡ 100 ರನ್ ಗಳಿಸುವುದು ಕಷ್ಟವಾಗಿತ್ತು. ಆದರೆ, ಈ ಇಬ್ಬರೂ ಆಟಗಾರರು 200ರ ಗಡಿ ದಾಟಿಸುವಂತೆ ಮಾಡಿದರು. 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಬಾಂಗ್ಲಾ ತಂಡವೇ ದಂಗಾಗಿ ಹೋಯಿತು.
ನಿತೀಶ್ ಮೊದಲ 12 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದ್ದರು. ನಂತರ ನಿತೀಶ್, ಮುಂದಿನ 15 ಎಸೆತಗಳಲ್ಲಿ 37 ರನ್ ಗಳಿಸಿದರು. 27 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಪೂರೈಸಿದರು. ಕೊನೆಗೆ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 74 ರನ್ ಗಳಿಸಿ ಮಿಂಚಿದರು. ಅಲ್ಲದೇ, ರಿಂಕು ಜೊತೆಗೂಡಿ ಶತಕದ ಜೊತೆಯಾಟವನ್ನು ನಡೆಸಿದರು. ನಿತೀಶ್ ಬರೋಬ್ಬರಿ 7 ಸಿಕ್ಸರ್ ಸಿಡಿಸಿದ್ದಾರೆ. ಈ ಆಟಕ್ಕೆ ಇಡೀ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ.