ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವುದನ್ನು ಯಾರಾದರೂ ತಡೆದರೆ, ಅವರಿಗೆ 11 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನು ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೊಸ ಪ್ರಕರಣವನ್ನು ದಾಖಲಿಸಿದೆ. ಇದರ ಜೊತೆಗೆ ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನವನ್ನು ಹರಡುತ್ತಿದ್ದ ಆರೋಪವನ್ನೂ ಆತನ ಮೇಲೆ ಹೊರಿಸಲಾಗಿದೆ.
ಎನ್‌ಐಎ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಘಟನೆಯ ಜನರಲ್ ಕೌನ್ಸಿಲ್ ಆಗಿರುವ ಪನ್ನು, ಆಗಸ್ಟ್ 10 ರಂದು ಪಾಕಿಸ್ತಾನದ ಲಾಹೋರ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಚೋದನಕಾರಿ ಘೋಷಣೆ ಮಾಡಿದ್ದ. ವಾಷಿಂಗ್ಟನ್‌ನಿಂದ ವಿಡಿಯೋ ಮೂಲಕ ಮಾತನಾಡಿದ್ದ ಆತ, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯುವ “ಸಿಖ್ ಸೈನಿಕರಿಗೆ” 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದ.
ಅದೇ ಕಾರ್ಯಕ್ರಮದಲ್ಲಿ ಪನ್ನು, ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶವನ್ನು ಒಳಗೊಂಡ ಹೊಸ ಖಲಿಸ್ತಾನದ ನಕ್ಷೆಯೊಂದನ್ನು ಅನಾವರಣಗೊಳಿಸಿದ್ದ. ಭಾರತದ ವಿರುದ್ಧ ಹೋರಾಡಲು ಎಸ್‌ಎಫ್‌ಜೆ “ಶಹೀದ್ ಜಥಾ” ಎಂಬ ಗುಂಪನ್ನು ರಚಿಸಿದೆ ಎಂದೂ ಆತ ಹೇಳಿಕೊಂಡಿದ್ದ. ಪನ್ನು ಭಾರತದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ “ಗುರುಪತ್ವಂತ್ ಸಿಂಗ್ ಪನ್ನು ಮತ್ತು ಇತರ ಅಪರಿಚಿತ ವ್ಯಕ್ತಿಗಳ” ವಿರುದ್ಧ ಎಫ್‌ಐಆರ್ ದಾಖಲಾಗಿದೆ. “ಅಪರಾಧದ ಗಂಭೀರತೆ, ಅದರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಾಮಗಳು ಹಾಗೂ ಇದರ ಹಿಂದಿರುವ ದೊಡ್ಡ ಪಿತೂರಿಯನ್ನು ಬಯಲಿಗೆಳೆಯುವ ಅಗತ್ಯವಿರುವುದರಿಂದ, ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು” ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.



















