ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸುಗಮ ಸಂಚಾರ, ಸುರಕ್ಷತೆ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನುಮುಂದೆ ಕ್ಯೂಆರ್ ಕೋಡ್ ಗಳನ್ನು ಅಳವಡಿಸಲು ಪ್ರಾಧಿಕಾರ ತೀರ್ಮಾನಿಸಿದೆ. ಶೀಘ್ರದಲ್ಲೇ ವಾಹನ ಚಾಲಕರ ಹಿತದೃಷ್ಟಿಯಿಂದ ಕ್ಯೂಆರ್ ಕೋಡ್ ಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ವಾಹನಗಳಲ್ಲಿ ಸಂಚರಿಸುವ ಚಾಲಕರು ಹಾಗೂ ಪ್ರಯಾಣಿಕರು ಇನ್ನುಮುಂದೆ ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಬಗ್ಗೆ ಮಾಹಿತಿ, ಅದರ ಮಾರ್ಗ, ಸ್ಥಳೀಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ, ತುರ್ತು ಸಂದರ್ಭದಲ್ಲಿ ನೆರವಾಗುವ ದೂರವಾಣಿ ಸಂಖ್ಯೆಗಳನ್ನು ಕೂಡ ಕ್ಯೂಆರ್ ಕೋಡ್ ಮೂಲಕ ಪಡೆಯಬಹುದಾಗಿದೆ.
ಎಲ್ಲೆಲ್ಲಿ ಕ್ಯೂಆರ್ ಕೋಡ್ ಅಳವಡಿಕೆ?
ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಅಂದರೆ, ವಿಶ್ರಾಂತಿ ತಾಣಗಳು, ಟೋಲ್ ಪ್ಲಾಜಾಗಳು, ಟ್ರಕ್ ಪಾರ್ಕಿಂಗ್ ಪ್ರದೇಶಗಳು, ಹೈವೇ ಆರಂಭ ಹಾಗೂ ಅಂತ್ಯದ ಪಾಯಿಂಟ್ ಗಳು ಸೇರಿ ವಿವಿಧೆಡೆ ಕ್ಯೂಆರ್ ಕೋಡ್ ಗಳನ್ನು ಅಳವಡಿಸಲಾಗುತ್ತದೆ. ಅಲ್ಲಿ ವಾಹನ ಚಾಲಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ವಾಹನ ಸವಾರರು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕ್ಯೂಆರ್ ಕೋಡ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೆದ್ದಾರಿಗಳ ಪ್ರಾಧಿಕಾರ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಕರೆ ಮಾಡಲು ದೂರವಾಣಿ ಸಂಖ್ಯೆಗಳೂ ಲಭ್ಯವಿರುವ ಕಾರಣ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದೆ.