ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸಿಹಿ ಸುದ್ದಿ ನೀಡಿದೆ. NHAI ಈಗ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದು, ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ವಾಹನ ಸವಾರರಿಗೆ 1 ಸಾವಿರ ರೂ. ಫಾಸ್ಟ್ಯಾಗ್ ರಿಚಾರ್ಜ್ಅನ್ನು ಉಚಿತವಾಗಿ ಮಾಡಲಾಗುತ್ತದೆ. ಸ್ವಚ್ಛತಾ ಅಭಿಯಾನವನ್ನು ಪ್ರೋತ್ಸಾಹಿಸಲು ಇಂತಹ ಆಫರ್ ನೀಡಲಾಗಿದೆ.
ವಾಹನ ಸವಾರರು 1 ಸಾವಿರ ರೂ. ಫಾಸ್ಟ್ಯಾಗ್ ರಿಚಾರ್ಜ್ ಪಡೆಯಲು ಮಾಡಬೇಕಾಗಿರುವುದು ಇಷ್ಟೇ. ನೀವು ವಾಹನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾಗುವಾಗ, ಟೋಲ್ ಪ್ಲಾಜಾಗಳಲ್ಲಿ ಕೊಳಕಾಗಿರುವ ಶೌಚಾಲಯ ಹಾಗೂ ಮೂತ್ರಾಲಯಗಳ ಫೋಟೋಗಳನ್ನು ತೆಗೆದು ಕಳುಹಿಸಬೇಕು. ಇಷ್ಟು ಮಾಡಿದರೆ ಸಾಕು, ನಿಮ್ಮ ಫಾಸ್ಟ್ಯಾಗ್ ಗೆ ಒಂದು ಸಾವಿರ ರೂ. ರಿಚಾರ್ಜ್ ಮಾಡಲಾಗುತ್ತದೆ. ಈ ಆಫರ್ ಅಕ್ಟೋಬರ್ 31ರವರೆಗೆ ಮಾತ್ರ ಲಭ್ಯವಿದೆ.
ಸ್ವಚ್ಛವಾಗಿರದ ಶೌಚಾಲಯಗಳ ಫೋಟೊಗಳನ್ನು ವಾಹನ ಚಾಲಕರು ರಾಜಮಾರ್ಗ ಯಾತ್ರಾ ಆ್ಯಪ್ (Rajmargyatra App) ನಲ್ಲಿ ಅಪ್ ಲೋಡ್ ಮಾಡಬೇಕು. ಫೋಟೋದೊಂದಿಗೆ ವಾಹನ ಚಾಲಕರ ಹೆಸರು, ಶೌಚಾಲಯ ಇರುವ ಪ್ರದೇಶ, ವಾಹನದ ನೋಂದಣಿ ಸಂಖ್ಯೆ (ವಿಆರ್ ಎನ್), ಮೊಬೈಲ್ ನಂಬರ್ ಸೇರಿ ವಿವಿಧ ಮಾಹಿತಿ ನೀಡಬೇಕು ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ. ವಾಹನ ಚಾಲಕರು ಒದಗಿಸಿದ VRNನೊಂದಿಗೆ ಲಿಂಕ್ ಆಗಿರುವ FASTag ಖಾತೆಗೆ ಒಂದು ಸಾವಿರ ರೂ. ಜಮೆ ಮಾಡಲಾಗುತ್ತದೆ.
ಹೀಗೆ, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕೆ ಲಭಿಸುವ ಒಂದು ಸಾವಿರ ರೂಪಾಯಿಯನ್ನು ವರ್ಗಾಯಿಸಲು ಹಾಗೂ ಕ್ಯಾಶ್ ಮಾಡಿಕೊಳ್ಳಲು ಆಗುವುದಿಲ್ಲ. ದೇಶಾದ್ಯಂತ ಅಭಿಯಾನ ಜಾರಿಯಲ್ಲಿದೆ. ಟೋಲ್ ಪ್ಲಾಜಾಗಳಲ್ಲಿರುವ ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿರುವುದಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ಹಾಗಾಗಿ, ಸಮಸ್ಯೆ ಬಗೆಹರಿಸಲು, ಟೋಲ್ ಪ್ಲಾಜಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೂಡ ಪ್ರಾಧಿಕಾರವು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.