ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯು(Pahalgam Attack) 26 ಪ್ರವಾಸಿಗರನ್ನು ಬಲಿಪಡೆದುಕೊಂಡ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ, “ಮುಂದಿನ ರಜಾದಿನಗಳನ್ನು ನಾವು ಕಾಶ್ಮೀರದಲ್ಲೇ ಕಳೆಯೋಣ. ಕಾಶ್ಮೀರ ಕಣಿವೆಯ ಪ್ರವಾಸೋದ್ಯಮವನ್ನು ಉತ್ತೇಜಿಸೋಣ ಮತ್ತು ಭಯೋತ್ಪಾದನೆಯ ವಿರುದ್ಧ ನಾವು ಸೆಟೆದು ನಿಲ್ಲೋಣ” ಎಂದು ಕರೆ ನೀಡಿದ್ದಾರೆ.
ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ 2025ರ ಸಮಾರಂಭದಲ್ಲಿ ಮಾತನಾಡಿದ ಸುನೀಲ್ ಶೆಟ್ಟಿ, ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಒತ್ತಿ ಹೇಳಿದ್ದಲ್ಲದೇ, ದೇಶದ ಲ್ಲ ನಾಗರಿಕರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.
ಜನರು ಭಯ ಮತ್ತು ದ್ವೇಷಕ್ಕೆ ಬಲಿಯಾಗಬಾರದು ಎಂದೂ ಅವರು ಮನವಿ ಮಾಡಿದರು. “ನಮಗೆ, ಮಾನವತೆಗೆ ನೀಡುವ ಸೇವೆಯೇ ದೇವರ ಸೇವೆಯಾಗಿದೆ. ಸರ್ವಶಕ್ತನು ಎಲ್ಲವನ್ನೂ ನೋಡುತ್ತಾನೆ ಮತ್ತು ಪ್ರತಿಕ್ರಿಯಿಸುತ್ತಾನೆ. ಇದೀಗ, ನಾವು ಭಾರತೀಯರಾಗಿ ಒಗ್ಗಟ್ಟಿನಿಂದ ಇರಬೇಕಾಗಿದೆ. ನಾವು ಭಯ ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿರುವವರ ಬಲೆಗೆ ಬೀಳಬಾರದು. ಒಗ್ಗಟ್ಟು ಪ್ರದರ್ಶಿಸಬೇಕು. ಉನ್ಕೋ ದಿಖಾನಾ ಹೈ ಕಿ ಕಾಶ್ಮೀರ್ ಹುಮಾರಾ ಥಾ, ಹುಮಾರಾ ಹೈ, ಔರ್ ಹುಮೇಶಾ ಹುಮಾರಾ ಹಿ ರಹೇಗಾ (ಕಾಶ್ಮೀರ ನಮ್ಮದೇ ಆಗಿತ್ತು, ಈಗಲೂ ನಮ್ಮದೇ ಆಗಿದೆ ಮತ್ತು ಮುಂದೆಯೂ ನಮ್ಮದೇ ಆಗಿರುತ್ತದೆ ಎಂಬುದನ್ನು ನಾವು ಅವರಿಗೆ ತೋರಿಸಬೇಕಾಗಿದೆ). ಅದಕ್ಕಾಗಿಯೇ ಸೇನೆ, ನಾಯಕರು ಮತ್ತು ಎಲ್ಲರೂ ಈ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ” ಎಂದರು.
ಮುಂದಿನ ರಜಾದಿನಗಳನ್ನು ನೀವು ಕಾಶ್ಮೀರದಲ್ಲೇ ಕಳೆಯಿರಿ ಎಂದೂ ಭಾರತೀಯ ನಾಗರಿಕರನ್ನು ಸುನೀಲ್ ಶೆಟ್ಟಿ ಒತ್ತಾಯಿಸಿದರು. “ದೇಶದ ನಾಗರಿಕನಾಗಿ, ನಾವು ಇದೊಂದು ಕೆಲಸವನ್ನು ಮಾಡಬೇಕು. ನಮ್ಮ ಮುಂದಿನ ರಜಾದಿನವನ್ನು ಕಾಶ್ಮೀರದಲ್ಲೇ ಕಳೆಯಬೇಕೇ ಹೊರತು ಬೇರೆಲ್ಲಿಯೂ ಅಲ್ಲ ಎಂದು ನಾವು ನಿರ್ಧರಿಸಬೇಕು. ನಾವು ಹೆದರುವುದಿಲ್ಲ ಮತ್ತು ನಮಗೆ ಯಾವುದೇ ಭಯವಿಲ್ಲ ಎಂಬುದನ್ನು ನಾವು ಅವರಿಗೆ ತೋರಿಸಬೇಕಾಗಿದೆ ಎಂದೂ ಶೆಟ್ಟಿ ಹೇಳಿದರು.



















