ವೆಲ್ಲಿಂಗ್ಟನ್/ನವದೆಹಲಿ : ನ್ಯೂಜಿಲೆಂಡ್ ತಂಡದ ಬಹುಮುಖ ಪ್ರತಿಭೆ ಗ್ಲೆನ್ ಫಿಲಿಪ್ಸ್, ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಹೊಸದೊಂದು ‘ಬ್ರಹ್ಮಾಸ್ತ್ರ’ವನ್ನು ಸಜ್ಜುಗೊಳಿಸುತ್ತಿದ್ದಾರೆ. ಈಗಾಗಲೇ ಬ್ಯಾಟಿಂಗ್, ಬೌಲಿಂಗ್, ವಿಕೆಟ್ ಕೀಪಿಂಗ್ ಮತ್ತು ಅಧ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿರುವ ಈ ಬಲಗೈ ಆಟಗಾರ, ಇದೀಗ ಎಡಗೈ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ.
ಇತ್ತೀಚೆಗೆ ನಡೆದ ಸೂಪರ್ ಸ್ಮ್ಯಾಶ್ (Super Smash) ಲೀಗ್ ಪಂದ್ಯದಲ್ಲಿ, ಫಿಲಿಪ್ಸ್ ಅನಿರೀಕ್ಷಿತವಾಗಿ ಎಡಗೈ ಬ್ಯಾಟಿಂಗ್ ನಿಲುವನ್ನು (Stance) ಬದಲಾಯಿಸಿಕೊಂಡು ಆಡುವ ಮೂಲಕ ಎದುರಾಳಿ ಬೌಲರ್‌ಗಳನ್ನು ಗೊಂದಲಕ್ಕೆ ದೂಡಿದ್ದರು. ಬಲಗೈ ಆಫ್-ಸ್ಪಿನ್ನರ್ ವಿರುದ್ಧ ಅವರು ಎಡಗೈ ಬ್ಯಾಟರ್ ಆಗಿ ಪರಿವರ್ತನೆಗೊಂಡು, ಕವರ್ಸ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವಕಪ್ ದೃಷ್ಟಿಯಿಂದ ಹೊಸ ಪ್ರಯೋಗ
ಇದು ಕೇವಲ ತಮಾಷೆಗಾಗಿ ಮಾಡಿದ ಪ್ರಯೋಗವಲ್ಲ ಎಂದು ಸ್ವತಃ ಗ್ಲೆನ್ ಫಿಲಿಪ್ಸ್ ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ 7ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ಹೊಸ ಕೌಶಲವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
“ನಾನು ಕಳೆದ ಎರಡು ವರ್ಷಗಳಿಂದ ಎಡಗೈ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ‘ನೆಗೆಟಿವ್ ಮ್ಯಾಚ್-ಅಪ್’ಗಳನ್ನು (Negative Match-ups) ಎದುರಿಸಲು ಇದು ಸಹಕಾರಿ. ಸಾಮಾನ್ಯವಾಗಿ ಬಲಗೈ ಬ್ಯಾಟರ್‌ಗಳಿಗೆ ಎಡಗೈ ಸ್ಪಿನ್ನರ್‌ಗಳು ಚೆಂಡನ್ನು ಹೊರಕ್ಕೆ ತಿರುಗಿಸಿದಾಗ (Turning away) ಹೊಡೆಯುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನಾನು ಎಡಗೈ ಬ್ಯಾಟರ್ ಆಗಿ ಬದಲಾದರೆ, ರನ್ ಗಳಿಸುವುದು ಸುಲಭವಾಗುತ್ತದೆ,” ಎಂದು ಫಿಲಿಪ್ಸ್ ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.\
ಭಾರತದ ಸ್ಪಿನ್ನರ್‌ಗಳಿಗೆ ಎಚ್ಚರಿಕೆ ಗಂಟೆ?
ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ತಂಡವು ಭಾರತದಲ್ಲಿ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಭಾರತದ ಪ್ರಮುಖ ಅಸ್ತ್ರಗಳಾದ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಸ್ಪಿನ್ನರ್‌ಗಳನ್ನು ಎದುರಿಸಲು ಫಿಲಿಪ್ಸ್ ಅವರ ಈ ‘ಎಡಗೈ ಅವತಾರ’ ಕಿವೀಸ್ ತಂಡಕ್ಕೆ ಆನೆಬಲ ತಂದುಕೊಡುವ ಸಾಧ್ಯತೆಯಿದೆ.
ಸದ್ಯಕ್ಕೆ ಇದನ್ನು ತಾಲೀಮು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಬಳಸುತ್ತಿದ್ದೇನೆ ಎಂದು ಫಿಲಿಪ್ಸ್ ಹೇಳಿದ್ದರೂ, ಭಾರತದ ಸ್ಪಿನ್ ಪಿಚ್‌ಗಳಲ್ಲಿ ಇದು ನ್ಯೂಜಿಲೆಂಡ್ ತಂಡದ ಪಾಲಿಗೆ ನಿರ್ಣಾಯಕ ‘ಎಕ್ಸ್-ಫ್ಯಾಕ್ಟರ್’ (X-Factor) ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ : ಸಿಂಧೂ ಒಪ್ಪಂದಕ್ಕೆ ಬ್ರೇಕ್ | ಚೆನಾಬ್ ನದಿಗೆ ಅಣೆಕಟ್ಟು.. ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶ!



















