ಲಾವೋಸ್: ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ಹಾಗೂ ಜಪಾನ್ ನ ಪ್ರಧಾನ ಮಂತ್ರಿಗಳ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ವೇಳೆ ನ್ಯೂಜಿಲೆಂಡ್ ಪ್ರಧಾನಿ ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
ಈ ಶೃಂಗ ಸಭೆಯಲ್ಲಿ ಆಸಿಯಾನ್ (ASEAN) ಪಾಲುದಾರರೊಂದಿಗೆ ಸಂಪರ್ಕ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು 10 ಅಂಶಗಳ ಯೋಜನೆ ಘೋಷಿಸಲಾಗಿದೆ. ಪ್ರಧಾನಿ ಮೋದಿ ಅವರು, ‘ಉತ್ಪಾದಕ’ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ “ಅದ್ಭುತ” ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ನ್ಯೂಜಿಲೆಂಡ್ ಪ್ರಧಾನಿ ಲುಕ್ಸನ್, ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. “ಭಾರತ ನಾನು ಪ್ರೀತಿಸುವ ಮತ್ತು ಅಪಾರವಾಗಿ ಮೆಚ್ಚುವ ದೇಶ. ನ್ಯೂಜಿಲೆಂಡ್‌ನಲ್ಲಿರುವ ಭಾರತೀಯರು ನ್ಯೂಜಿಲೆಂಡ್‌ನಲ್ಲಿ ಬಹಳ ಉತ್ತಮ ಸಾಧನೆ ಮಾಡಿದ್ದಾರೆ. ತುಂಬಾ ಸ್ಪೂರ್ತಿದಾಯಕರಾಗಿದ್ದಾರೆ. ಅವರು ನಂಬಲಾಗದಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ಗುಣಗಾನ ಮಾಡಿದ್ದಾರೆ.