ಮುಂಬೈ: ಮಹಾರಾಷ್ಟ್ರದ ಸತಾರಾದಲ್ಲಿ ನಡೆದ ವೈದ್ಯೆಯ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಮೃತ ವೈದ್ಯೆಯು ಒತ್ತಡಕ್ಕೆ ಮಣಿದು ತಮ್ಮ ಮಗಳ ಸುಳ್ಳು ಮರಣೋತ್ತರ ಪರೀಕ್ಷಾ ವರದಿಯನ್ನು ಸಿದ್ಧಪಡಿಸಿದ್ದರು ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಸತಾರಾ ಜಿಲ್ಲೆಯ ಭಾಗ್ಯಶ್ರೀ ಮಾರುತಿ ಪಚಾಂಗ್ನೆ ಎಂಬುವವರೇ ಈ ಆರೋಪ ಮಾಡಿದ್ದು, ತಮ್ಮ ಮಗಳು ದೀಪಾಲಿ ಮಾರುತಿ ಅವರದ್ದು ಸಹಜ ಸಾವಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಮಗಳ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆಯೂ ಅವರು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆ, ತಮಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಅಂಗೈ ಮೇಲೆ ಡೆತ್ ನೋಟ್ ಬರೆದಿದ್ದ ಅವರು, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬಡಾನೆ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದರೆ, ಪ್ರಶಾಂತ್ ಬಂಕರ್ ಎಂಬ ಟೆಕ್ಕಿ ಮಾನಸಿಕ ಕಿರುಕುಳ ನೀಡಿದ್ದಾಗಿ ಮರಣಪತ್ರದಲ್ಲಿ ಆರೋಪಿಸಿದ್ದರು. ಇದರ ಜೊತೆಗೆ ನಾಲ್ಕು ಪುಟಗಳ ಮತ್ತೊಂದು ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಮಾಜಿ ಸಂಸದರೊಬ್ಬರ ಇಬ್ಬರು ಆಪ್ತ ಸಹಾಯಕರು, ಆರೋಪಿಯೊಬ್ಬನನ್ನು ವೈದ್ಯಕೀಯವಾಗಿ ಸದೃಢ (ಫಿಟ್) ಎಂದು ಘೋಷಿಸುವಂತೆ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಉಲ್ಲೇಖಿಸಿದ್ದರು.
ಭಾಗ್ಯಶ್ರೀ ಪಚಾಂಗ್ನೆ ಮಾಡಿದ ಆರೋಪವೇನು?
ಇದೀಗ ಭಾಗ್ಯಶ್ರೀ ಎಂಬವರು ಮೃತ ವೈದ್ಯೆಯ ವಿರುದ್ಧವೇ ಆರೋಪ ಮಾಡಿದ್ದಾರೆ. ನನ್ನ ಪುತ್ರಿ ದೀಪಾಲಿಯನ್ನು ಭಾರತೀಯ ಸೇನೆಯ ಅಧಿಕಾರಿ ಅಜಿಂಕ್ಯ ಹನುಮಂತ್ ನಿಂಬಾಳ್ಕರ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದೆವು. ಆದರೆ, ಪತಿ ಮತ್ತು ಆತನ ಮನೆಯವರಿಂದ ದೀಪಾಲಿ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ಭಾಗ್ಯಶ್ರೀ ಆರೋಪಿಸಿದ್ದಾರೆ. ಈ ಹಿಂಸೆ ತಾಳಲಾರದೆ ಆಗಸ್ಟ್ 19 ರಂದು ದೀಪಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು. ಆದರೆ, ಇದು ಆತ್ಮಹತ್ಯೆಯಾಗಿರಲು ಸಾಧ್ಯವಿಲ್ಲ, ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎನ್ನುವುದು ಭಾಗ್ಯಶ್ರೀ ಅವರ ವಾದವಾಗಿದೆ.
ದೀಪಾಲಿ ಸಾವನ್ನಪ್ಪಿ ಐದು ದಿನ ಕಳೆದರೂ ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ನೀಡಿರಲಿಲ್ಲ. ಒಂದು ತಿಂಗಳ ನಂತರ ವರದಿ ಕೈಸೇರಿದಾಗ, ಅದು ಸಂಪೂರ್ಣವಾಗಿ ತಿರುಚಲ್ಪಟ್ಟಿತ್ತು ಎಂದು ಅವರು ಆರೋಪಿಸಿದ್ದಾರೆ. ತಮ್ಮ ಅಳಿಯ ಅಜಿಂಕ್ಯ ನಿಂಬಾಳ್ಕರ್, ರಾಜಕೀಯ ಮತ್ತು ಪೊಲೀಸ್ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಭಾಗ್ಯಶ್ರೀ ದೂರಿದ್ದಾರೆ. “ನನ್ನ ಮಗಳು ಆರು ತಿಂಗಳ ಗರ್ಭಿಣಿಯಾಗಿದ್ದಳು. ಅಲ್ಲದೆ ಆಕೆಗೆ ಒಂದೂವರೆ ವರ್ಷದ ಮಗಳೂ ಇದ್ದಳು. ಅವಳು ಅಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದು ಕೊಲೆ ಎಂಬುದು ನನ್ನ ಬಲವಾದ ಅನುಮಾನ. ಈಗ ಸತಾರಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯೆಯೇ ನನ್ನ ಮಗಳ ಮರಣೋತ್ತರ ಪರೀಕ್ಷೆ ವರದಿಯನ್ನು ತಿರುಚಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಇಬ್ಬರ ಬಂಧನ
ವೈದ್ಯೆ ಆತ್ಮಹತ್ಯೆ ಪ್ರಕರಣವು ಮಹಾರಾಷ್ಟ್ರದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬಡಾನೆ ಪೊಲೀಸರಿಗೆ ಶರಣಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಬ್ಬರ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನ್ಯಾ.ಸೂರ್ಯಕಾಂತ್ ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿ?



















