ಹೂಸ್ಟನ್: ಬರೋಬ್ಬರಿ 50 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟಿಮಿಸ್ II’ ಮಿಷನ್ ಶನಿವಾರ ಮುಂಜಾನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ಓರಿಯನ್ ಕ್ಯಾಪ್ಸುಲ್ ಪೆಸಿಫಿಕ್ ಸಾಗರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ದಾಖಲೆ ಬರೆದಿದೆ. ಈ ಯಶಸ್ಸಿನೊಂದಿಗೆ ಚಂದ್ರನ ಮೇಲೆ ಶಾಶ್ವತ ನೆಲೆ ನಿರ್ಮಿಸುವ ಮಾನವನ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
10 ದಿನಗಳ ಈ ಸುದೀರ್ಘ ಪಯಣದಲ್ಲಿ ಕೊನೆಯ ದಿನ ಅತೀ ಹೆಚ್ಚು ಸವಾಲಿನಿಂದ ಕೂಡಿತ್ತು. ಓರಿಯನ್ ಕ್ಯಾಪ್ಸುಲ್ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಅದರ ವೇಗ ಗಂಟೆಗೆ ಬರೋಬ್ಬರಿ 40,000 ಕಿಲೋಮೀಟರ್‌ಗಳಷ್ಟಿತ್ತು. ಈ ಸಂದರ್ಭದಲ್ಲಿ ಘರ್ಷಣೆಯಿಂದ ಉಂಟಾದ ಉಷ್ಣತೆ 2,760 ಡಿಗ್ರಿ ಸೆಲ್ಸಿಯಸ್ ತಲುಪಿತ್ತು, ಅಂದರೆ ಇದು ಸೂರ್ಯನ ಮೇಲ್ಮೈ ಉಷ್ಣತೆಯ ಅರ್ಧದಷ್ಟಿತ್ತು. ತೀವ್ರ ಶಾಖದಿಂದಾಗಿ ಸುಮಾರು ಆರು ನಿಮಿಷಗಳ ಕಾಲ ಸಂಪರ್ಕ ಕಡಿತಗೊಂಡಾಗ ಹೂಸ್ಟನ್‌ನ ನಿಯಂತ್ರಣ ಕೊಠಡಿಯಲ್ಲಿ ಆತಂಕ ಮನೆಮಾಡಿತ್ತು. ಆದರೆ, ಹೀಟ್ ಶೀಲ್ಡ್ (ಶಾಖ ಕವಚ) ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಗಗನಯಾತ್ರಿಗಳನ್ನು ರಕ್ಷಿಸಿತು. ಕಮಾಂಡರ್ ರೀಡ್ ವೈಸ್‌ಮನ್ ಅವರ ಧ್ವನಿ ಮರಳಿ ಕೇಳುತ್ತಿದ್ದಂತೆಯೇ ವಿಜ್ಞಾನಿಗಳು ಸಂಭ್ರಮಿಸಿದರು.

ದಾಖಲೆ ಬರೆದ ತಂಡ
ಆರ್ಟಿಮಿಸ್ II ಮಿಷನ್ ಹಲವು ಸಾಮಾಜಿಕ ದಾಖಲೆಗಳಿಗೂ ಸಾಕ್ಷಿಯಾಯಿತು. ಈ ತಂಡದಲ್ಲಿ ಕ್ರಿಸ್ಟಿನಾ ಕೋಚ್ ಚಂದ್ರಯಾನ ಕೈಗೊಂಡ ಮೊದಲ ಮಹಿಳೆಯಾದರೆ, ವಿಕ್ಟರ್ ಗ್ಲೋವರ್ ಮೊದಲ ಕಪ್ಪು ವರ್ಣೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೆರೆಮಿ ಹ್ಯಾನ್ಸೆನ್ ಅವರು ಅಮೆರಿಕನ್ನರಲ್ಲದ (ಕೆನಡಾ ಮೂಲದ) ಮೊದಲ ಗಗನಯಾತ್ರಿ ಎಂಬ ಇತಿಹಾಸ ನಿರ್ಮಿಸಿದರು. ಅಷ್ಟೇ ಅಲ್ಲದೆ, ಈ ತಂಡವು ಭೂಮಿಯಿಂದ ಬರೋಬ್ಬರಿ 4,06,771 ಕಿಲೋಮೀಟರ್ ದೂರ ಪ್ರಯಾಣಿಸುವ ಮೂಲಕ, 1970ರ ಅಪೊಲೊ 13 ಮಿಷನ್ ಮಾಡಿದ್ದ ದೂರದ ದಾಖಲೆಯನ್ನೂ ಮುರಿದಿದೆ.

ಕ್ಯಾಮೆರಾದಲ್ಲಿ ಸೆರೆಯಾದ ಚಂದಿರನ ‘ಕರಾಳ ಮುಖ’
ಗಗನಯಾತ್ರಿಗಳು ಚಂದ್ರನ ಸುತ್ತ ಹಾರಾಟ ನಡೆಸುವಾಗ ಭೂಮಿಯ ಉದಯವನ್ನು ಹೋಲುವ ‘ಅರ್ಥ್‌ಸೆಟ್’ (Earthset) ನಂತಹ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇದು 1968ರ ಐಕಾನಿಕ್ ‘ಅರ್ಥ್‌ರೈಸ್’ ಚಿತ್ರವನ್ನು ನೆನಪಿಸುವಂತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾನವ ಕಣ್ಣುಗಳು ಚಂದ್ರನ ಹಿಂದಿನ ಕತ್ತಲ ಭಾಗವನ್ನು (Dark side)ನೇರವಾಗಿ ಕಂಡಿವೆ.
ಮುಂದಿನ ಹಾದಿ: ಚಂದ್ರನ ದಕ್ಷಿಣ ಧ್ರುವಕ್ಕೆ ಪಯಣ
ಈ ಯೋಜನೆಯ ಯಶಸ್ಸು ಆರ್ಟಿಮಿಸ್ III ಮತ್ತು IV ಯೋಜನೆಗಳಿಗೆ ದಾರಿಯಾಗಲಿದೆ. ಮುಂದಿನ ವರ್ಷಗಳಲ್ಲಿ ಗಗನಯಾತ್ರಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಿದ್ಧತೆ ನಡೆಸಲಿದ್ದಾರೆ. ಈ ನಡುವೆ ಕ್ಯಾಪ್ಸುಲ್‌ನ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷಗಳು ಕಂಡುಬಂದಿದ್ದರೂ, ಒಟ್ಟಾರೆ ಮಿಷನ್ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ. ಅಮೆರಿಕವು ಈ ಮೂಲಕ 2030ರ ವೇಳೆಗೆ ಚಂದ್ರನ ಮೇಲೆ ಮನುಷ್ಯನನ್ನು ಇಳಿಸಲು ಯತ್ನಿಸುತ್ತಿರುವ ಚೀನಾಗೆ ಪ್ರಬಲ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: IPL ಆಡಲು ಕೋರ್ಟ್ ಮೆಟ್ಟಿಲೇರಿದ್ದ ಆರ್‌ಸಿಬಿ ವೇಗಿ ನುವಾನ್ ತುಷಾರ ದಿಢೀರ್ ಯೂಟರ್ನ್!



















