ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಂತೆಯೇ, ಮಿತ್ರರಾಷ್ಟ್ರ ಭಾರತಕ್ಕೆ ಇರಾನ್ ನಿರಾಳತೆ ಒದಗಿಸಿದೆ. ಭಾರತದ ಧ್ವಜ ಹೊಂದಿರುವ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ (SCI) ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಲು ಇರಾನ್ ಅನುಮತಿ ನೀಡಿದ್ದು, ಎರಡೂ ನೌಕೆಗಳು ಇಂದು ಭಾರತದತ್ತ ಮುಖ ಮಾಡಿವೆ. ಇದು ಭಾರತ ಮತ್ತು ಇರಾನ್ ನಡುವಿನ ಸತತ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳಿಗೆ ಸಂದ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ.
‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳ ಸುರಕ್ಷಿತ ಯಾನ
‘ಶಿವಾಲಿಕ್’ ಮತ್ತು ‘ನಂದಾದೇವಿ’ ಎಂಬ ಹೆಸರಿನ ಹಡಗುಗಳು ಇದೀಗ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಭಾರತದತ್ತ ಪ್ರಯಾಣ ಆರಂಭಿಸಿವೆ. ಮೂಲಗಳ ಪ್ರಕಾರ, ಇರಾನ್ ಮತ್ತು ಆ ಭಾಗದ ಇತರ ಎಲ್ಲಾ ದೇಶಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗಿದೆ. ಶಿವಾಲಿಕ್ ಹಡಗಿನಲ್ಲಿ ಸುಮಾರು 40,000 ಮೆಟ್ರಿಕ್ ಟನ್ ಗ್ಯಾಸ್ ತುಂಬಿದ್ದರೆ, ನಂದಾದೇವಿ ಹಡಗಿನಲ್ಲಿಯೂ ಅಪಾರ ಪ್ರಮಾಣದ ಇಂಧನ ಸರಕು ಇದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಇರಾನ್ ಕೂಡ ಪ್ರತಿದಾಳಿ ನಡೆಸಿದ್ದರಿಂದ ಹೊರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಸಿಲುಕಿಕೊಂಡಿದ್ದವು. ಜತೆಗೆ, ಜಲಸಂಧಿ ದಾಟಲು ಯಾವುದೇ ನೌಕೆ ಪ್ರಯತ್ನಿಸಿದರೆ ಸುಟ್ಟು ಹಾಕುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಹೀಗೆ ಸಿಲುಕಿಕೊಂಡ ಹಡಗುಗಳಲ್ಲಿ ಭಾರತದ 28 ಹಡಗುಗಳೂ ಸೇರಿದ್ದವು.
ತೆರೆಮರೆಯಲ್ಲಿ ನಡೆದ ಸತತ ರಾಜತಾಂತ್ರಿಕ ಕಸರತ್ತು
ಹೊರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಸಿಲುಕಿರುವ ಎರಡು ಡಜನ್‌ಗೂ ಹೆಚ್ಚು ಭಾರತೀಯ ಸರಕು ಸಾಗಣೆ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿತ್ತು. ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾದಾಗಿನಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ಇರಾನ್ ಸಹವರ್ತಿ ಸೈಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಫೆಬ್ರವರಿ 28, ಮಾರ್ಚ್ 5, 10 ಮತ್ತು 12 ರಂದು ಬರೋಬ್ಬರಿ ನಾಲ್ಕು ಸುತ್ತಿನ ದೂರವಾಣಿ ಮಾತುಕತೆ ನಡೆಸಿದ್ದರು. ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಎಲ್ಲಾ ಸತತ ಸಂಪರ್ಕ ಹಾಗೂ ಮಾತುಕತೆಗಳ ಫಲವೆಂಬಂತೆ ಈಗ ಹಡಗುಗಳ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದೆ.
ಇಂಧನ ಪೂರೈಕೆಗೆ ಪ್ರಥಮ ಆದ್ಯತೆ
ಇರಾನ್ ಅಧ್ಯಕ್ಷರೊಂದಿಗಿನ ಮಾತುಕತೆಯ ವೇಳೆ ಪ್ರಧಾನಿ ಮೋದಿ, ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳು ಮತ್ತು ನಾಗರಿಕರ ಪ್ರಾಣಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. “ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆ, ಜೊತೆಗೆ ಸರಕು ಮತ್ತು ಇಂಧನದ ನಿರಂತರ ಸಾಗಣೆಗೆ ಭಾರತವು ಪ್ರಥಮ ಆದ್ಯತೆ ನೀಡುತ್ತದೆ” ಎಂದು ಅವರು ಹೇಳಿರುವುದಾಗಿ ಸ್ವತಃ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು. ಇದೇ ವೇಳೆ, ಒಮಾನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿನ್ ಸಾಗಿಸುತ್ತಿರುವ ಭಾರತದ ಧ್ವಜ ಹೊಂದಿರುವ ಮತ್ತೊಂದು ತೈಲ ಟ್ಯಾಂಕರ್ ‘ಜಗ್ ಪ್ರಕಾಶ್’ ಕೂಡ ಹೊರ್ಮುಜ್ ಜಲಸಂಧಿಯ ಪೂರ್ವ ಭಾಗದಿಂದ ಪಯಣ ಬೆಳೆಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಪ್ರಸ್ತುತ ವಿಶಾಲ ಗಲ್ಫ್ ಪ್ರದೇಶದ ವಾಣಿಜ್ಯ, ಬಂದರು ಮತ್ತು ಕಡಲಾಚೆಯ ಹಡಗುಗಳಲ್ಲಿ ಸುಮಾರು 23,000 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಭದ್ರತೆಯ ಖಾತ್ರಿಗಾಗಿಯೂ ಸರ್ಕಾರ ಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ : ಇರಾನ್‌ನ ‘ಕ್ರೌನ್ ಜ್ಯುವೆಲ್’ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಭೀಕರ ದಾಳಿ : ಸೇನಾ ನೆಲೆಗಳು ಸಂಪೂರ್ಣ ಧ್ವಂಸ



















