ಡೈಮಂಡ್ ಲೀಗ್ ನಲ್ಲಿ ಭಾರತೀಯ ಸ್ಟಾರ್ ಹಾಗೂ ಚಿನ್ನದ ಹುಡುಗ ನೀರಜ್ ಚೋಪ್ರಾ ಹೊಸ ದಾಖಲೆ ಬರೆದಿದ್ದಾರೆ.
ಬರೋಬ್ಬರಿ 90.23 ಮೀಟರ್ ದೂರ ಜಾವೆಲಿನ್ ಎಸೆಯುವುದರ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ ಜಾವೆಲಿನ್ ಕ್ರೀಡೆಯಲ್ಲಿ ಅತೀ ದೂರ ಜಾವೆಲಿನ್ ಎಸೆದ ಹಾಗೂ 90 ಮೀಟರ್ ಕ್ರಮಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಚೋಪ್ರಾ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
2022 ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ 89.94 ಮೀಟರ್ ಎಸೆದಿದ್ದೇ ಇಲ್ಲಿಯವರೆಗಿನ ಸಾಧನೆಯಾಗಿತ್ತು. ಆದರೆ ಈ ಬಾರಿ 90 ಮೀಟರ್ನೊಂದಿಗೆ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚೋಪ್ರಾ ತಮ್ಮ ಮೂರನೇ ಎಸೆತದಲ್ಲಿ 90.23 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ. ಆನಂತರ ಮತ್ತೆ 90ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ದ್ವಿತೀಯ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರದೊಂದಿಗೆ ಮೊದಲ ಸ್ಥಾನ ಪಡೆದರು. ನೀರಜ್ 90.23 ಮೀಟರ್ನೊಂದಿಗೆ 2ನೇ ಸ್ಥಾನ ಪಡೆದರು. ಗ್ರೆನೇಡಿಯನ್ ಆಂಡರ್ಸನ್ ಪೀಟರ್ಸ್ 85.64 ಮೀಟರ್ನೊಂದಿಗೆ ಮೂರನೇ ಸ್ಥಾನ ಪಡೆದರು.