ಉಡುಪಿ : 15ದಿನಗಳ ಹಿಂದಷ್ಟೇ ಮಂಗಳೂರಿನ ರೆಮೋನಾ ಎವೆಟ್ ಪಿರೇರಾ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿ ನಾಡಿನ ಗಮನ ಸೆಳೆದಿದ್ದರೆ, ಇದೀಗ ಉಡುಪಿಯ ಯುವತಿಯೊಬ್ಬರು ಈ ದಾಖಲೆಯನ್ನು ಮುರಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮುಂಡ್ಮಿನಜೆಡ್ಡಿನ ನಿವಾಸಿ ವಿದುಷಿ ದೀಕ್ಷಾ ವಿ. ಇದೇ ಆ.21ರಿಂದ 30ರವರೆಗೆ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ತನ್ನ ಹೆಸರಿನಲ್ಲಿ ವಿಶ್ವ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ.
ಭರತನಾಟ್ಯ ಕಲಾ ಗುರುಗಳಾದ ವಿದ್ವಾನ್ ಶ್ರೀಧರ ರಾವ್ ಅವರ ಶಿಷ್ಯೆಯಾಗಿರುವ ದೀಕ್ಷಾ ವಿ. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಗುರುಗಳೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಭರತನಾಟ್ಯದಲ್ಲಿ ವಿಶೇಷ ಪ್ರೀತಿ ಹಾಗೂ ಆಸಕ್ತಿಯನ್ನು ಹೊಂದಿರುವ ದೀಕ್ಷಾ, ಈ ಕಲೆಯಲ್ಲಿ ವಿಶೇಷ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿದ್ದಾರೆ. ಇದೀಗ ಹಲವರ ಮಾರ್ಗದರ್ಶನ, ಸಲಹೆಯೊಂದಿಗೆ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಸಾಧಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಬಹುಮುಖ ಪ್ರತಿಭೆಯ ವಿದುಷಿ ದೀಕ್ಷಾ ಭರತನಾಟ್ಯವನ್ನಲ್ಲದೇ, ಯಕ್ಷಗಾನ, ವೀಣೆ, ಚಂಡೆ, ಮದ್ದಳೆ, ಚಿತ್ರಕಲೆ ಸಹಿತ ಅನೇಕ ಪ್ರಕಾರಗಳಲ್ಲಿ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ಮೆರೆದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬ್ರಹ್ಮಾವರದ ಲಿಟ್ಸ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಅಮೃತಭಾರತಿ ಪಿಯು ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನಲ್ಲಿ ಪೂರ್ಣಗೊಳಿಸಿರುವ ದೀಕ್ಷಾ, ಇದೀಗ ಕುಂಜಿಬೆಟ್ಟಿನ ಡಾ.ಟಿಎಂಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್ ಪದವಿ ಓದುತಿದ್ದಾರೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ‘ನವರಸ ದೀಕ್ಷಾ ವೈಭವಂ’ ಎಂದು ಹೆಸರಿಸಲಾಗಿದ್ದು, ಕೊನೆಯ ದಿನದಂದು ಅದ್ದೂರಿಯ ಕಾರ್ಯಕ್ರಮ ನಡೆಸುವುದಾಗಿ ರತ್ನ ಸಂಜೀವ ಕಲಾಮಂಡಲದ ಅಶ್ವಿನಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಶ್ರೀಧರ ರಾವ್, ವಿದುಷಿ ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.



















