ಬೆಂಗಳೂರು: ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ನ ಫೈನಲ್ ಪಂದ್ಯಕ್ಕೆ ಮೊದಲು ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ಮಾರ್ಚ್ 9 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅದಕ್ಕಿಂತ ಮೊದಲು ಇಂಗ್ಲೆಂಡ್ ಕ್ರಿಕೆಟಿಗ ಮಾಹಿತಿ ನೀಡಿದ್ದಾರೆ.
ಐಸಿಸಿ ಟೂರ್ನಮೆಂಟ್ ಫೈನಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡ ಭಾರತ ವಿರುದ್ಧ ಮೇಲುಗೈ ಸಾಧಿಸಿದೆ. ಈ ಹಿಂದೆ ಎರಡು ಬಾರಿ ಐಸಿಸಿ ಟೂರ್ನಮೆಂಟ್ ಫೈನಲ್ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದೆ. ಹೀಗಾಗಿ ಮುಂಬರುವ ಫೈನಲ್ ಪಂದ್ಯಕ್ಕೆ ಮುನ್ನ, ಹುಸೇನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ನ್ಯೂಜಿಲೆಂಡ್ ಒತ್ತಡಕ್ಕೆ ಒಳಗಾಗುವುದಿಲ್ಲ. ಹೀಗಾಗಿ ಅವರನ್ನು ಸೋಲಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ.
“ಕಿವೀಸ್ ತಂಡದ ಆಟಗಾರರು ಒತ್ತಡಕ್ಕೆ ಕುಗ್ಗುವುದಿಲ್ಲ, ಅವರು ಚೋಕರ್ಸ್ ಕೂಡ ಅಲ್ಲ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆ್ಯರೊನ್ ಫಿಂಚ್ ಅವರೊಂದಿಗೆ ಊಟ ಮಾಡುತ್ತಿದ್ದಾಗ, ಅವರು ನ್ಯೂಜಿಲೆಂಡ್ ತಂಡದ ಬಗ್ಗೆ ಹೇಳಿದ ಮಾತು ಬಹಳ ಸತ್ಯ. ನ್ಯೂಜಿಲೆಂಡ್ ಎಂದಿಗೂ ತಮ್ಮನ್ನು ತಾವು ಸೋಲಿಸುವ ತಂಡವಾಗಿರುವುದಿಲ್ಲ. ಅವರು ಆಟಕ್ಕೆ ಬರುತ್ತಾರೆ ಮತ್ತು ತಮ್ಮ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ” ಎಂದು ಹುಸೇನ್ ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ
ಹುಸೇನ್ ಅವರ ಪ್ರಕಾರ, ನ್ಯೂಜಿಲೆಂಡ್ ತಂಡದ ಸಂಪೂರ್ಣ ಬಲಿಷ್ಠ ಬಳಗವಾಗಿದೆ. ಸವಾಲೊಡ್ಡುವ ಕ್ರಿಕೆಟಿಗರನ್ನೇ ಒಳಗೊಂಡಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರು ಮತ್ತು ಯುವ ಪ್ರತಿಭೆಗಳ ನಡುವಿನ ಉತ್ತಮ ಸಮತೋಲನವಿದೆ. “ನ್ಯೂಜಿಲೆಂಡ್ ತಂಡದಲ್ಲಿ ಪ್ರಬಲ ಕ್ರಿಕೆಟಿಗರಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಅವರು ತಮ್ಮ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ. ಹಾಗಾಗಿ ಸೆಮಿಫೈನಲ್ ಮತ್ತು ಫೈನಲ್ ಹಂತಕ್ಕೆ ಬರುತ್ತಾರೆ. ಈ ತಂಡವು ಅನುಭವಿ ಮತ್ತು ಯುವ ಆಟಗಾರರ ಮಧ್ಯೆ ಸಮತೋಲನ ಹೊಂದಿದೆ. ಕೇನ್ ವಿಲಿಯಮ್ಸನ್ ಅವರು ಒಬ್ಬ ಅದ್ಭುತ ಕ್ರಿಕೆಟಿಗನಾಗಿದ್ದು, ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ರಚಿನ್ ರವೀಂದ್ರ ಅವರಂತಹ ಯುವ ಆಟಗಾರರೂ ತಂಡಕ್ಕೆ ಪೂರಕವಾಗಿದ್ದಾರೆ. ಅವರು ಸೋತರೆ ಅದು ಅವರ ತಪ್ಪಿನಿಂದಿ ಆಗಿರುವುದಿಲ್ಲ. ಭಾರತ ಉತ್ತಮವಾಗಿ ಆಡಿದರೆ ಮಾತ್ರ ಸೋಲುತ್ತಾರೆ ,” ಎಂದು ಹುಸೇನ್ ಹೇಳಿದರು.
ಐಸಿಸಿ ಟೂರ್ನಮೆಂಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹಿನ್ನಡೆ
ಐಸಿಸಿ ಟೂರ್ನಮೆಂಟ್ ಇತಿಹಾಸದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ಒಟ್ಟು 16 ಪಂದ್ಯಗಳನ್ನು ಆಡಿವೆ, ಇದರಲ್ಲಿ ನ್ಯೂಜಿಲೆಂಡ್ 10 ಬಾರಿ ಗೆದ್ದಿದೆ. ಈ ತಂಡ ಅನೇಕ ಮಹತ್ವದ ಟೂರ್ನಮೆಂಟ್‌ಗಳಲ್ಲಿ ಭಾರತದ ಸೋಲಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತವು ತನ್ನ ಹಳೆಯ ಪರಾಜಯಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಫೈನಲ್‌ನಲ್ಲಿ ಎಚ್ಚರಿಕೆಯ ಮನಸ್ಥಿತಿಯಲ್ಲಿರಲಿದೆ.