ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸ್ಥಿತಿಗೆ ತಲುಪುತ್ತಿದ್ದಂತೆ, ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್, ಗಿಲ್ ಅವರ ಕೆಲವು ತಾಂತ್ರಿಕ ತಪ್ಪುಗಳನ್ನು ಕಟುವಾಗಿ ಟೀಕಿಸಿದ್ದು, ಭಾರತದ ಬೌಲರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಗಿಲ್ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ನ ಮೂರನೇ ದಿನದ ಆಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 544 ರನ್‌ಗಳ ಬೃಹತ್ ಮೊತ್ತ ಪೇರಿಸಿ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಗಿಲ್ ಅವರ ನಾಯಕತ್ವದ ವೈಫಲ್ಯಗಳನ್ನು ನಾಸರ್ ಹುಸೇನ್ ತಮ್ಮ ಅಂಕಣದಲ್ಲಿ ಎತ್ತಿ ತೋರಿಸಿದ್ದಾರೆ.
ಬೌಲರ್‌ಗಳ ಬಳಕೆಯಲ್ಲಿ ಎಡವಿದ ಗಿಲ್
ನಾಸರ್ ಹುಸೇನ್ ಅವರ ಟೀಕೆಯ ಪ್ರಮುಖ ಅಂಶವೆಂದರೆ, ಪ್ರಮುಖ ಬೌಲರ್‌ಗಳನ್ನು ಬಳಸಿಕೊಂಡ ರೀತಿ. “ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಬ್ರಿಯಾನ್ ಸ್ಟಾಥಮ್ ಎಂಡ್‌ನಿಂದ ಬೌಲಿಂಗ್ ಮಾಡಿ ಹೆಚ್ಚುವರಿ ಬೌನ್ಸ್‌ನ ಲಾಭ ಪಡೆದು ಐದು ವಿಕೆಟ್ ಪಡೆದರು. ಆದರೆ, ಭಾರತದ ಪ್ರಮುಖ ಅಸ್ತ್ರವಾದ ಜಸ್‌ಪ್ರೀತ್ ಬುಮ್ರಾ ಅವರನ್ನು ಆ ಎಂಡ್‌ನಿಂದ ಹೆಚ್ಚು ಬೌಲಿಂಗ್ ಮಾಡಿಸದೇ ಇದ್ದದ್ದು ಆಶ್ಚರ್ಯ ಮೂಡಿಸಿತು,” ಎಂದು ಹುಸೇನ್ ‘ಡೈಲಿ ಮೇಲ್’ ಅಂಕಣದಲ್ಲಿ ಬರೆದಿದ್ದಾರೆ.
ವಾಷಿಂಗ್ಟನ್ ಸುಂದರ್ ಕಡೆಗಣನೆ
ಇನ್ನು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಸರಿಯಾಗಿ ಬಳಸಿಕೊಳ್ಳದ ಬಗ್ಗೆಯೂ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪಂದ್ಯದ ಎರಡನೇ ದಿನ, ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದಾಗ, ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಇಂಗ್ಲೆಂಡ್ 305 ರನ್ ಗಳಿಸುವವರೆಗೂ, ಅಂದರೆ 69ನೇ ಓವರ್‌ವರೆಗೂ ಅವರಿಗೆ ಬೌಲಿಂಗ್ ನೀಡಲೇ ಇಲ್ಲ. ಇದು ಅತ್ಯಂತ ಆಶ್ಚರ್ಯಕರ ನಿರ್ಧಾರ,” ಎಂದು ಅವರು ಹೇಳಿದ್ದಾರೆ.
“ಕಳೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಆತ್ಮವಿಶ್ವಾಸದಲ್ಲಿದ್ದ ಸುಂದರ್, ಬೌಲಿಂಗ್ ಮಾಡಲು ಬಂದ ತಕ್ಷಣವೇ ಓಲ್ಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಅವರ ವಿಕೆಟ್‌ಗಳನ್ನು ಪಡೆದು ಮಿಂಚಿದರು. ಆಗ, ಇಷ್ಟು ಹೊತ್ತು ಇವರನ್ನು ಎಲ್ಲಿಟ್ಟಿದ್ದರು ಎಂಬ ಪ್ರಶ್ನೆ ಮೂಡುತ್ತದೆ,” ಎಂದು ಹುಸೇನ್ ಗಿಲ್ ಅವರ ತಂತ್ರಗಾರಿಕೆಯನ್ನು ಪ್ರಶ್ನಿಸಿದ್ದಾರೆ.
ಸರಣಿ ಉಳಿಸಿಕೊಳ್ಳಬೇಕಾದರೆ, ಭಾರತ ತಂಡವು ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ. ಆದರೆ, ನಾಯಕನಾಗಿ ಶುಭಮನ್ ಗಿಲ್ ಅವರ ಇಂತಹ ತಾಂತ್ರಿಕ ತಪ್ಪುಗಳು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ.


















